ಉತ್ತರಪ್ರದೇಶ: ಮಗಳಿಗೆ ಕಿರುಕುಳ ನೀಡುವುದನ್ನು ಪ್ರಶ್ನಿಸಿದ ಮುಸ್ಲಿಮ್ ವೃದ್ಧನ ಬರ್ಬರ ಹತ್ಯೆ

Prasthutha|

ಲಕ್ನೋ: ತನ್ನ ಮಗಳಿಗೆ ಕಿರುಕುಳ ನೀಡುವುದನ್ನು ಪ್ರಶ್ನಿಸಿದ ಮುಸ್ಲಿಮ್  ವೃದ್ಧರೊಬ್ಬರನ್ನು ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಗುಂಪೊಂದು ಥಳಿಸಿ ಬರ್ಬರವಾಗಿ ಹತ್ಯೆಗೈದಿದೆ. ಈ ಘಟನೆ ಮೆಜಾ ಪೊಲೀಸ್ ಠಾಣಾ ವ್ಯಾಪ್ತಿಯ ಮದಾನಿಯಾ ಗ್ರಾಮದಲ್ಲಿ ನಡೆದಿದೆ.

- Advertisement -

ತನ್ನ ಮಗಳನ್ನು ಮಾಧವ್ ನಿಷಾದ್, ಕಲ್ಲು ಮತ್ತು ಗೋಲು ಕಿರುಕುಳ ನೀಡುತ್ತಿದ್ದರು. ಇದನ್ನು ಪ್ರಶ್ನಿಸಲು ಹೋದ 50 ವರ್ಷದ ಮಾಜಿದ್ ಅಲಿಯನ್ನು ಯುವಕರು ಥಳಿಸಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.  ಅಲಿಯ ಮಗಳು ಸಾದಿಯಾ ಹತ್ತಿರದ ಮಾವಿನ ತೋಟಕ್ಕೆ ಹೋಗಿದ್ದಳು. ಯುವಕರು ಸಾದಿಯಾ ಬಳಿ ಅಶ್ಲೀಲ ಮಾತುಗಳನ್ನಾಡಿ ಮೋಹಿಸಲು ಪ್ರಯತ್ನಿಸಿದ್ದಾರೆ. ನಂತರ ಕಿರುಕುಳ ನೀಡುತ್ತಿದ್ದ ಗುಂಪಿನಿಂದ ತಪ್ಪಿಸಿಕೊಂಡು ಮನೆಗೆ ತಲುಪಿದ ಸಾದಿಯಾ, ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ವಿಚಾರಿಸಲು ತನ್ನ ಮಗನೊಂದಿಗೆ ಯುವಕರ ಮನೆಗೆ ಹೋದ ಅಲಿಯ ಮೇಲೆ ಮೂವರು ಯುವಕರು ಮತ್ತು ಇತರ ಐವರು ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಅಲಿ ಹೇಗಾದರೂ ತಪ್ಪಿಸಿಕೊಂಡು ಬಂದು ತನ್ನ ಮನೆಯ ಬಾಗಿಲ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆರೋಪಿ ಪಟ್ಟಿಯಲ್ಲಿರುವ ಮಹಿಳೆಯರು ಮೂವರು ಪ್ರಮುಖ ಆರೋಪಿಗಳಾದ ಮಾಧವ್ ನಿಷಾದ್, ಕಲ್ಲು ಮತ್ತು ಗೋಲು ಅವರ ತಾಯಂದಿರಾಗಿದ್ದಾರೆ. ಮೂರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಮರಣೋತ್ತರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Join Whatsapp