ಡಿಟೆನ್ಶನ್ ಸೆಂಟರ್’ಗೆ 68 ಜನರನ್ನು ಕಳುಹಿಸಿದ ಅಸ್ಸಾಮ್ ಸರ್ಕಾರ

Prasthutha|

ಗುವಾಹಟಿ: ವಿದೇಶಿಯರು ಎಂದು ಘೋಷಿಸಲಾಗುವವರನ್ನು ಇರಿಸಲು ಅಸ್ಸಾಮಿನ ಗೋಲ್ಪಾರಾದಲ್ಲಿ ನಿರ್ಮಿಸಿರುವ ಡಿಟೆನ್ಶನ್ ಸೆಂಟರ್ (ಬಂಧನ ಕೇಂದ್ರ)ಗೆ ಶುಕ್ರವಾರ ಮೊದಲ ಬಾರಿಗೆ 68 ಜನರನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿಯಿಂದ 150 ಕಿಲೋಮೀಟರ್ ದೂರದಲ್ಲಿರುವ ಮತಿಯಾ ಟ್ರಾನ್ಸಿಟ್ ಕ್ಯಾಂಪ್’ಗೆ ವಿದೇಶೀಯರೆನ್ನಲಾದವರನ್ನು ಸಾಗಿಸಲು ಇದನ್ನು ಆರಂಭಿಸಲಾಗಿದೆ.

- Advertisement -

ಕಾನೂನುಬಾಹಿರವಾಗಿ ಭಾರತದಲ್ಲಿ ವಾಸಿಸುವವರಿಗಾಗಿ ಕೇಂದ್ರದ ಮಾರ್ಗದರ್ಶನದಲ್ಲಿ ಈ ಈ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇಲ್ಲಿಯವರೆಗೆ ಅಸ್ಸಾಮಿನ ಬೇರೆ ಬೇರೆ ಕಡೆ ಇರುವ ಜೈಲಿನ ಬಂಧನ ಕೇಂದ್ರಗಳಲ್ಲಿ ಇವರನ್ನು ಇಡಲಾಗುತ್ತಿತ್ತು.

  ನ್ಯಾಯಮಂಡಳಿ ಯಾರನ್ನು ವಿದೇಶೀಯರೆಂದು ಘೋಷಿಸಿದೆಯೋ ಮತ್ತು ವೀಸಾ ನಿಯಮಾವಳಿ ಮೀರಿದ್ದಕ್ಕಾಗಿ ಕೋರ್ಟಿನಿಂದ ಯಾರು ಶಿಕ್ಷೆಗೊಳಗಾಗಿದ್ದಾರೋ ಅವರನ್ನು ಈ ಸಾಗಣೆ ಕೇಂದ್ರಕ್ಕೆ ಹಾಕಲಾಗುತ್ತದೆ.

ಈಗ 45 ಮಂದಿ ಪುರುಷರು, 21 ಮಂದಿ ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ 68 ಜನರನ್ನು ಈ ಸಾಗಣೆ ಕೇಂದ್ರಕ್ಕೆ ತುಂಬಲಾಗಿದೆ. ಅವರೆಲ್ಲ ವಿದೇಶೀಯರೆಂದು ಗುರುತಿಸಲಾದವರು ಎಂದು ಅಸ್ಸಾಂ ಜೈಲು ಇನ್ಸ್ ಪೆಕ್ಟರ್ ಜನರಲ್ ಬರ್ನಾಲಿ ಶರ್ಮಾ ತಿಳಿಸಿದ್ದಾರೆ.

ಒಟ್ಟು ಆರು ಬಂಧನ ಕೇಂದ್ರಗಳಿವೆ. ಕೋಕ್ರಾಜಾರ್, ಗೋಲ್ಪಾರ ಜಿಲ್ಲಾ ಜೈಲುಗಳ ಒಳಗೆ ಎರಡು, ತೇಜ್ಪುರ, ಸಿಲ್ಚಾರ್, ದಿಬ್ರುಗಡ, ಜೊರ್ಹಾಟ್  ಕೇಂದ್ರೀಯ ಜೈಲುಗಳ ಒಳಗೆ ನಾಲ್ಕು ವಿದೇಶಿಯರ ಬಂಧನ ಕೇಂದ್ರಗಳಿವೆ. 2022ರ ಸೆಪ್ಟೆಂಬರ್ ನ ಸಮೀಕ್ಷೆಯಂತೆ ಈ ಬಂಧನ ಕೇಂದ್ರಗಳಲ್ಲಿ 195 ಜನ ಇದ್ದರು. ವಿದೇಶೀಯರ ಬಂಧನವನ್ನು ಮಾನವೀಯಗೊಳಿಸಲು ಅಸ್ಸಾಂ ಸರಕಾರವು ಡಿಟೆನ್ಶನ್ ಸೆಂಟರ್ ಗಳನ್ನು ಟ್ರಾನ್ಸಿಟ್ ಕ್ಯಾಂಪ್ ಗಳನ್ನಾಗಿಸಲು 2021ರಲ್ಲಿ ತೀರ್ಮಾನ ಕೈಗೊಂಡಿತ್ತು.

ಮುಖ್ಯ ಮಾಟಿಯಾ ಸಾಗಣೆ ಕೇಂದ್ರವನ್ನು  3,000 ಕಾನೂನುಬಾಹಿರ ವಿದೇಶಿಯರಿಗಾಗಿ 46 ಕೋಟಿ ರೂಪಾಯಿ ವೆಚ್ಚದಲ್ಲಿ, 20 ಬಿಗಾ ಜಾಗದಲ್ಲಿ ಗದ್ದೆಗಳು ಮತ್ತು ಕಾಡಿನ ನಡುವಣ ಸ್ಥಳದಲ್ಲಿ ನಿರ್ಮಿಸಲಾಗಿದೆ.

“ಸಂರಚನೆ ಸಿದ್ಧವಾಗಿದೆ, ಕೆಲವೇ ಸಿಬ್ಬಂದಿಯನ್ನು ಸದ್ಯ ನೇಮಿಸಲಾಗಿದೆ. ಹಲವಾರು ಸವಲತ್ತುಗಳು ಆಗಬೇಕಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಈ ಸ್ಥಳ ಬದಲಾವಣೆಗೆ ಅಗತ್ಯದ ಎಲ್ಲವನ್ನೂ ಒದಗಿಸಬೇಕಾಗಿದೆ” ಎಂದೂ ಬರ್ನಾಲಿ ಶರ್ಮಾ ತಿಳಿಸಿದರು.

- Advertisement -