ಸರಕಾರಿ ಮದ್ರಸಾಗಳನ್ನು ಮುಚ್ಚಲು ಅಸ್ಸಾಂ ಸರಕಾರದ ನಿರ್ಧಾರ

Prasthutha|

ಗುವಾಹತಿ : ಎಲ್ಲಾ ಸರಕಾರಿ ಮದ್ರಸ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲು ಅಸ್ಸಾಂ ಸರಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಡಿ.28ರಿಂದ ಆರಂಭಗೊಳ್ಳಲಿರುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಸೂದೆಯೊಂದನ್ನು ಮಂಡಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

- Advertisement -

ಸರಕಾರಿ ಮದ್ರಸಾಗಳನ್ನು ಮುಚ್ಚುವುದರ ಜೊತೆಗೆ, ಸಂಸ್ಕೃತ ಶಾಲೆಗಳನ್ನು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ, ರಾಷ್ಟ್ರೀಯತೆ ಕುರಿತ ಅಧ್ಯಯನಕ್ಕೆ ಅವಕಾಶವಾಗುವಂತೆ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಂಸ್ಕೃತ ಶಾಲೆಗಳನ್ನು ಮುಚ್ಚಿ ಭಾರತೀಯ ಸಂಸ್ಕೃತಿಯ ಅಧ್ಯಯನದ ಹೆಸರಲ್ಲಿ ಆರೆಸ್ಸೆಸ್ ಚಿಂತನೆಗಳನ್ನು ಹೇರುವ ಸಾಧ್ಯತೆ ನಿಚ್ಚಳವಾಗಿದೆ.

683 ಸರಕಾರಿ ಮದ್ರಸಾಗಳನ್ನು ಮುಚ್ಚಿ ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುತ್ತದೆ. 97 ಸಂಸ್ಕೃತ ಶಾಲೆಗಳನ್ನು ಕುಮಾರ ಭಾಸ್ಕರ ವರ್ಮಾ ಸಂಸ್ಕೃತ ವಿಶ್ವವಿದ್ಯಾಲಯದ ಸುಪರ್ದಿಗೆ ಹಸ್ತಾಂತರಿಸಲಾಗುತ್ತದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಖಾಸಗಿ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮದ್ರಸಾ ಶಾಲೆಗಳನ್ನು ಮುಚ್ಚಲಾಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

- Advertisement -