ತಮ್ಮ ಪಕ್ಷಕ್ಕೆ ಜನಮತವಿಲ್ಲದೆಡೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡಿ ಅಪರೇಶನ್ ಕಮಲವೆಂಬ ಭ್ರಷ್ಟಾಚಾರಕ್ಕೆ ಕೈ ಹಾಕಿ ವಿರೋಧಿ ಪಕ್ಷದ ಶಾಸಕರನ್ನು ಖರೀದಿಸುವ ಬಿಜೆಪಿಯ ಕುತಂತ್ರ ದೇಶದೆಲ್ಲೆಡೆ ಈಗ ಕುಖ್ಯಾತಿ ಪಡೆದಿದೆ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಇದನ್ನೇ ಮಾಡಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದಿರುವುದು ತಿಳಿದಿರುವ ವಿಚಾರ. ಆದರೆ ಅಸ್ಸಾಂ ಚುನಾವಣೆ ಮುಗಿದಿದ್ದು, ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF) ನ ಎಲ್ಲಾ ಅಭ್ಯರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದೆ. ಗೆದ್ದ ಅಭ್ಯರ್ಥಿಗಳನ್ನು ಬಿಜೆಪಿ ಅಪರೇಶನ್ ಕಮಲಕ್ಕೆ ಗುರಿಪಡಿಸಬಹುದು ಎಂಬ ಭೀತಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಅಸ್ಸಾಂನಲ್ಲಿ ಬಿಪಿಎಫ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಗಮನಾರ್ಹ ಅಂಶವಾಗಿದೆ.
ಮೂರು ದಿನಗಳ ಹಿಂದಷ್ಟೇ ಅಸ್ಸಾಮಿನ ಕಾಂಗ್ರೆಸ್ ಹಾಗೂ ಎಐಯುಡಿಎಫ್ ತಮ್ಮ ಕೆಲಅಭ್ಯರ್ಥಿಗಳನ್ನು ರಾಜಸ್ಥಾನಕ್ಕೆ ಕಳುಹಿಸಿತ್ತು. ಅಸ್ಸಾಮಿನಲ್ಲೇ ಉಳಿದಿರುವ ಬಿಪಿಎಫ್ ನ ಏಕೈಕ ಅಭ್ಯರ್ಥಿ ಪ್ರಮೀಳಾ ರಾಣಿ ಅವರು ತಮ್ಮ ಪಕ್ಷದ ಬೆಳವಣಿಗೆಯನ್ನು ದೃಢೀಕರಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳು ವಿದೇಶಕ್ಕೆ ಹೋಗಿರುವುದು ನಿಜ. ಆದರೆ ಯಾವ ದೇಶಕ್ಕೆ ಹೋದರೆನ್ನುವುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಕೂಪವಾಗಿರುವ ಅಪರೇಶನ್ ಕಮಲಕ್ಕೆ ಬೆದರಿ ಅವರೆಲ್ಲಾ ವಿದೇಶಕ್ಕೆ ಹೋಗಿದ್ದಾರೆಯೇ ಎನ್ನುವ ಪ್ರಶ್ನೆಗೆ ಅವರು, “ಕುದುರೆ ವ್ಯಾಪಾರದ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ” ಎಂದುತ್ತರಿಸಿದ್ದಾರೆ.