Home ಟಾಪ್ ಸುದ್ದಿಗಳು ಎಎಸ್’ಐ ಮಗನ ಮೇಲೆ ಗುಂಡು ಹಾರಿಸಿ ದರೋಡೆ: ಮೂವರ ಬಂಧನ

ಎಎಸ್’ಐ ಮಗನ ಮೇಲೆ ಗುಂಡು ಹಾರಿಸಿ ದರೋಡೆ: ಮೂವರ ಬಂಧನ

ಬೆಂಗಳೂರು: ಸಹಾಯಕ ಪೊಲೀಸ್ ಸಬ್ ಇನ್ಸ್’ಪೆಕ್ಟರ್ (ಎಎಸ್’ಐ) ನಾರಾಯಣಸ್ವಾಮಿ ಮನೆಯಲ್ಲಿ ದರೋಡೆ ನಡೆಸಿ ಗುಂಡು ಹಾರಿಸಿದ ಮೂವರು ಆರೋಪಿಗಳನ್ನು ಬಂಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು, ಮೂರು ಪಿಸ್ತೂಲ್’ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಉತ್ತರ ಪ್ರದೇಶ ಮೂಲದ ಆರೀಫ್ (35), ಜಮಷೀದ್ ಖಾನ್ (27) ಹಾಗೂ ಆಂಧ್ರಪ್ರದೇಶದ ಪಟಾಣ್ ಯಾರಿಸ್ ಖಾನ್(30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ತಿಳಿಸಿದ್ದಾರೆ.


ಕಳೆದ ನ. 8ರಂದು ಬಾಗೇಪಲ್ಲಿಯ ಪೆರಸಂದ್ರದ ಎಎಸ್’ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ನಗನಾಣ್ಯ ಲೂಟಿ ಮಾಡಿದ್ದರು. ಪ್ರತಿರೋಧ ತೋರಿದ ಮನೆ ಮಾಲೀಕ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿ ಅವರ ಪುತ್ರ ಶರತ್ ಕಾಲಿಗೆ ಗುಂಡೇಟು ಹಾರಿಸಿದ್ದು ಕೃತ್ಯದಿಂದ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದರು.


ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ಬಂಧಿತರಿಂದ ಮೂರು ನಾಡ ಪಿಸ್ತೂಲ್’ಗಳು, ಖಾಲಿ ಮ್ಯಾಗ್ಜಿನ್ ಹೊಂದಿರುವ ಒಂದು ಪಿಸ್ತೂಲ್, ರೂ. 3.41 ಲಕ್ಷ ನಗದು, ಕೃತ್ಯಕ್ಕೆ ಬಳಿಸಿದ ಕಾರು, 71 ಗ್ರಾಂ ತೂಕದ ಚಿನ್ನ, 21 ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಕೃತ್ಯ ನಡೆಸಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇನ್ನೂ ಘಟನೆಯಲ್ಲಿ ಗಾಯಾಗೊಂಡಿದ್ದ ಎಎಸ್’ಐ ನಾರಾಯಣಸ್ವಾಮಿ ಹಾಗೂ ಆತನ ಪುತ್ರ ಶರತ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ನಾಗೇಶ್ ತಿಳಿಸಿದರು.

Join Whatsapp
Exit mobile version