Home ಟಾಪ್ ಸುದ್ದಿಗಳು ಏಷ್ಯಾ ಕಪ್| ಹಾಂಕಾಂಗ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ

ಏಷ್ಯಾ ಕಪ್| ಹಾಂಕಾಂಗ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ

ದುಬೈ: ಏಷ್ಯಾ ಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ, ದುರ್ಬಲ ಹಾಂಕಾಂಗ್ ಸವಾಲನ್ನು ಎದುರಿಸಲಿದೆ.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ಗೆದ್ದರೆ ಎ ಗುಂಪಿನಲ್ಲಿ ಮೊದಲ ತಂಡವಾಗಿ ಭಾರತ ಸೂಪರ್-4 ಹಂತ ತಲುಪಲಿದೆ. ಬಿ ಗುಂಪಿನಲ್ಲಿ ಈಗಾಗಲೇ ಅಫ್ಘಾನಿಸ್ತಾನ ತಂಡ ಎರಡು ಪಂದ್ಯಗಳನ್ನು ಗೆದ್ದು ಮೊದಲ ತಂಡವಾಗಿ ಸೂಪರ್-4 ಹಂತ ಪ್ರವೇಶಿಸಿದೆ.

ಬುಧವಾರ, ಭಾರತ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಟಿ20 ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ-ಹಾಂಕಾಂಗ್ ತಂಡಗಳು ಮುಖಾಮುಖಿಯಾಗುತ್ತಿದೆ. ಏಷ್ಯಾ ಕಪ್ ಏಕದಿನ ಮಾದರಿಯಲ್ಲಿ ಉಭಯ ತಂಡಗಳು ಇದುವರೆಗೂ ಎರಡು ಬಾರಿ ಪರಸ್ಪರ ಎದುರಾಗಿದ್ದು, ಎರಡೂ ಪಂದ್ಯಗಳಲ್ಲಿಯೂ ಭಾರತ ಜಯಭೇರಿ ಭಾರಿಸಿತ್ತು.

2008ರಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 374 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಹಾಂಗ್ ಕಾಂಗ್ ಕೇವಲ 118 ರನ್ ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಮತ್ತೆ 2018ರಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 286 ರನ್ ಬೆನ್ನಟ್ಟುವ ವೇಳೆ ಹಾಂಕಾಂಗ್, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತ್ತು. ಆ ಮೂಲಕ 26 ರನ್ ಗಳ ಅಂತರದಲ್ಲಿ ಟೀಮ್ ಇಂಡಿಯಾಗೆ ಶರಣಾಗಿತ್ತು.

ದುಬೈನಲ್ಲಿ ವಿಪರೀತ ಬೇಸಿಗೆಯ ವಾತಾವರಣ ಕಾರಣ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಆಟಗಾರರು ನೆಟ್ಸ್ ಅಭ್ಯಾಸದಲ್ಲಿ ಭಾಗವಹಿಸಿರಲಿಲ್ಲ.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯಜುವೇಂದ್ರ ಚಾಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.

ಹಾಂಕಾಂಗ್: ನಿಝಾಕತ್ ಖಾನ್, ಬಾಬರ್ ಹಯಾತ್,  ಯಾಸ್ಮಿನ್ ಮುರ್ತಾಜಾ,  ಕಿಂಚಿತ್ ಶಾ,  ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್),  ಹಾರೂನ್ ಅರ್ಷದ್,  ಐಝಾಝ್ ಖಾನ್,  ಜೀಶನ್ ಅಲಿ,  ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮುಹಮ್ಮದ್ ಘಝ್ನಾಫರ್

Join Whatsapp
Exit mobile version