Home ಕ್ರೀಡೆ ಏಷ್ಯಾ ಕಪ್| ಟೀಮ್ ಇಂಡಿಯಾದಿಂದ ರವೀಂದ್ರ ಜಡೇಡಾ ಔಟ್, ಅಕ್ಷರ್ ಪಟೇಲ್ ಗೆ ಸ್ಥಾನ

ಏಷ್ಯಾ ಕಪ್| ಟೀಮ್ ಇಂಡಿಯಾದಿಂದ ರವೀಂದ್ರ ಜಡೇಡಾ ಔಟ್, ಅಕ್ಷರ್ ಪಟೇಲ್ ಗೆ ಸ್ಥಾನ

ದುಬೈ: ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದೆ. ಈಗಾಗಲೇ ಅಪ್ಘಾನಿಸ್ತಾನ, ಟೀಮ್‌ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಸೂಪರ್‌-4 ಹಂತ ಪ್ರವೇಶಿಸಿವೆ. ಶುಕ್ರವಾರ ನಡೆಯುವ ಹಾಂಕಾಂಗ್‌-ಪಾಕಿಸ್ತಾನ ನಡುವಿನ ಪಂದ್ಯದ ವಿಜೇತರು ಕೊನೆಯ ತಂಡವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದ್ದಾರೆ. ಎಲ್ಲಾ ನಾಲ್ಕು ತಂಡಗಳು ತಲಾ ಒಂದು ಬಾರಿ ಸೂಪರ್‌-4 ಹಂತದಲ್ಲಿ ಮುಖಾಮುಖಿಯಾಗಲಿವೆ.

ಹಾಂಕಾಂಗ್‌-ಪಾಕಿಸ್ತಾನ ನಡುವಿನ ಪಂದ್ಯದ ವಿಜೇತರನ್ನು, ಸೆಪ್ಟಂಬರ್‌ ನಾಲ್ಕರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಮ್‌ ಇಂಡಿಯಾಗೆ ತೀವ್ರ ಹಿನ್ನಡೆಯಾಗುವ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಏಷ್ಯಾ ಕಪ್‌ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ವಿಷಯವನ್ನು  ಬಸಿಸಿಐ ಟ್ವಿಟರ್‌ ನಲ್ಲಿ ಖಚಿತಪಡಿಸಿದೆ. ಜಡೇಜಾ ಅವರ ಸ್ಥಾನಕ್ಕೆ ಮತ್ತೋರ್ವ ಆಲ್‌ ರೌಂಡರ್‌ ಅಕ್ಷರ್‌ ಪಟೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ʻರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡ, ಜಡೇಜಾ ಅವರ ಆರೋಗ್ಯದ ಕುರಿತು ನಿಗಾ ವಹಿಸುತ್ತಿದೆʼ ಎಂದು ಬಿಸಿಸಿಐ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಗ್ರೂಪ್‌ ಎ ನಲ್ಲಿ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಜಡೇಜಾ ಗಾಯಗೊಂಡಿರುವ ಸಾಧ್ಯತೆಯಿದೆ. ಆದರೆ ಈ ಕುರಿತು ಅಧಿಕೃತವಾಗಿ ಬಿಸಿಸಿಐ ಏನನ್ನೂ ಹೇಳಿಲ್ಲ. ಜಡೇಜಾ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಜಡ್ಡು ಪ್ರಮುಖ ಪಾತ್ರ ವಹಿಸಿದ್ದರು.

Join Whatsapp
Exit mobile version