Home ಕ್ರೀಡೆ ಏಷ್ಯಾ ಕಪ್‌: ಸೂಪರ್‌ 4 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ

ಏಷ್ಯಾ ಕಪ್‌: ಸೂಪರ್‌ 4 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ

ದುಬೈ: ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಲಲ್ಲಿ ನಿಲ್ಲುವಂತೆ ಮಾಡಿದ ಏಷ್ಯಾಕಪ್‌ ಸೂಪರ್‌-4 ಹಂತದ ಪಂದ್ಯದಲ್ಲಿ ಪಾಕಿಸ್ತಾನ  ಸ್ಮರಣೀಯ ಗೆಲುವು ದಾಖಲಿಸಿದೆ. ಟೀಮ್‌ ಇಂಡಿಯಾ ನೀಡಿದ್ದ 182 ರನ್‌ಗಳ ಗುರಿಯನ್ನು ಮುಟ್ಟಲು ಪಾಕಿಸ್ತಾನ, ಅಂತಿಮ ಓವರ್‌ನ ಐದನೇ ಎಸೆತದವರೆಗೂ ಹೋರಾಡಿತು.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಮ್‌ ಇಂಡಿಯಾ, 7 ವಿಕೆಟ್‌ ನಷ್ಟದಲ್ಲಿ 181 ರನ್‌ಗಳಿಸಿತ್ತು. ಸವಾಲಿನ ಗುರಿ ಬೆನ್ನಟ್ಟಿದ ಬಾಬರ್‌ ಅಝಂ ಪಡೆ, 19.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 182 ರನ್‌ಗಳಿಸಿತು. ಆ ಮೂಲಕ ಲೀಗ್‌ ಹಂತದಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.

 ನಿರ್ಣಾಯಕ ಘಟ್ಟದಲ್ಲಿ ಕ್ಯಾಚ್‌ ಕೈಚೆಲ್ಲಿದ ಅರ್ಷ್‌ದೀಪ್‌ !

ರವಿ ಬಿಷ್ಣೋಯ್‌ ಎಸೆದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಅರ್ಷ್‌ದೀಪ್‌ ಸಿಂಗ್‌, 1 ರನ್‌ಗಳಿಸಿದ್ದ ಆಸಿಫ್‌ ಅಲಿಯ ಸುಲಭ ಕ್ಯಾಚ್‌ ಚೆಲ್ಲಿದ್ದರು. ಇದರ ಲಾಭ ಪಡೆದ ಅಲಿ, ಆ ಬಳಿಕ 1 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಪಾಕಿಸ್ತಾನದ ಗೆಲುವಿಗೆ ಅಂತಿಮ ಎರಡು ಓವರ್‌ಗಳಲ್ಲಿ 26 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ ಎಸೆದ ಅನುಭವಿ ಭುವನೇಶ್ವರ್‌ ಕುಮಾರ್‌ 19 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಅಂತಿಮ ಓವರ್‌ನಲ್ಲಿ 7 ರನ್‌ ನಿಯಂತ್ರಿಸಲು ಅರ್ಷ್‌ದೀಪ್‌ ಪ್ರಯತ್ನಿಸಿದರಾದರೂ ಸಫಲರಾಗಲಿಲ್ಲ.

ರಿಝ್ವಾನ್‌ ಹೋರಾಟಕ್ಕೆ ಸಂದ ಜಯ

ಕೀಪಿಂಗ್‌ ವೇಳೆ ಗಾಯಗೊಂಡಿದ್ದರೂ ಸಹ ಧೃತಿಗೆಡದೆ, ಆರಂಭಿಕನಾಗಿ ಮೈದಾನಕ್ಕಿಳಿದ ಮುಹಮ್ಮದ್‌ ರಿಝ್ವಾನ್‌ ಆಕರ್ಷಕ ಅರ್ಧಶತಕ ದಾಖಲಿಸಿದರು. 51 ಎಸೆತಗಳನ್ನು ಎದುರಿಸಿದ ರಿಝ್ವಾನ್‌, 2 ಸಿಕ್ಸರ್‌ ಮತ್ತು 6 ಬೌಂಡರಿಗಳ ನೆರವಿನಿಂದ 71 ರನ್‌ಗಳಿಸಿ ನಿರ್ಗಮಿಸಿದರು. ಮುಹಮ್ಮದ್‌ ನವಾಝ್‌ 42 ರನ್‌ಗಳಿಸಿದರು.

Join Whatsapp
Exit mobile version