Home ಟಾಪ್ ಸುದ್ದಿಗಳು ಆಶಿಶ್ ಮಿಶ್ರಾ ಜಾಮೀನು ರದ್ದು: ನ್ಯಾಯಾಲಯಕ್ಕೆ ಶರಣಾದ ಕೇಂದ್ರ ಸಚಿವರ ಪುತ್ರ

ಆಶಿಶ್ ಮಿಶ್ರಾ ಜಾಮೀನು ರದ್ದು: ನ್ಯಾಯಾಲಯಕ್ಕೆ ಶರಣಾದ ಕೇಂದ್ರ ಸಚಿವರ ಪುತ್ರ

ನವದೆಹಲಿ: ಸುಪ್ರೀಮ್ ಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಲಖಿಂಪುರ ಖೇರಿ ರೈತರ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಭಾನುವಾರ ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಸದ್ಯ ಅಧಿಕಾರಿಗಳು ಆಶಿಶ್ ಮಿಶ್ರಾನನ್ನು ಮತ್ತೆ ಲಖಿಂಪುರ ಜೈಲಿಗೆ ಕಳುಹಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಮಿಶ್ರಾ ಅವರನ್ನು ಪ್ರತ್ಯೇಕ ಬ್ಯಾರಕ್ ನಲ್ಲಿ ಇರಿಸಲಾಗುವುದೆಂದು ಜೈಲು ಅಧೀಕ್ಷಕ ಪಿಪಿ ಸಿಂಗ್ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಲಖಿಂಪುರ ಖೇರಿ ಹತ್ಯೆಗೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಆಶಿಶ್ ಮಿಶ್ರಾ ಎಂಬಾತನ ಜಾಮೀನನ್ನು ಕಳೆದ ವಾರ ಸುಪ್ರೀಮ್ ಕೋರ್ಟ್ ರದ್ದುಗೊಳಿಸಿತ್ತು.

ಈ ಮಧ್ಯೆ ಒಂದು ವಾರದೊಳಗೆ ಶರಣಾಗುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಪೀಠ ಸೂಚಿಸಿತ್ತು.

ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಆಶಿಶ್ ಮಿಶ್ರಾ ಅವರಿಗೆ ಸೇರಿದ ವಾಹನವು ಪ್ರತಿಭಟನಾ ನಿರತ ರೈತರ ಮೇಲೆ ಹರಿದಿತ್ತು.

ಈ ಘಟನೆಯಲ್ಲಿ ನಾಲ್ವರು ರೈತರು, ಪತ್ರಕರ್ತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದರು.

ಮೃತರ ಕುಟುಂಬಗಳು ಹೈಕೋರ್ಟ್‌ನ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಮ್ ಕೋರ್ಟ್ ಈ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಎಂಬಾತನ ಜಾಮೀನು ಅರ್ಜಿ ರದ್ದುಗೊಳಿಸಿ ಆದೇಶ ನೀಡಿದ್ದು, ಇದೀಗ ಆತ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

Join Whatsapp
Exit mobile version