Home ಟಾಪ್ ಸುದ್ದಿಗಳು ಸುಸ್ಥಿರ ಅಭಿವೃದ್ಧಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿಯ ಸೇರಿಸಲು ಕ್ರಮ: ಡಾ.ಸಿ.ಎನ್. ಅಶ್ವತ್ಥನಾರಾಯಣ

ಸುಸ್ಥಿರ ಅಭಿವೃದ್ಧಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿಯ ಸೇರಿಸಲು ಕ್ರಮ: ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು: ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನ ತಾರಸಿಯಲ್ಲಿ ಅಳವಡಿಸಲಾಗಿರುವ 354 ಕಿಲೋವಾಟ್ ಸಾಮರ್ಥ್ಯದ ತಾರಸಿ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯು ಇಂದು ಉದ್ಘಾಟನೆಗೊಂಡಿತು. ಇಡೀ ದೇಶದಲ್ಲಿ ಖಾಸಗಿ ಅಪಾರ್ಟ್ ಮೆಂಟ್ ಗಳ ಪೈಕಿ ಅಳವಡಿಸಲಾಗಿರುವ ಅತ್ಯಧಿಕ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಇದು ಎನ್ನಲಾಗಿದೆ.


ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇಡೀ ಸಮಾಜವು ಈ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆ ಪ್ರಮುಖ ವಿಷಯವಾಗಿದೆ. ನಾವು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡರೂ ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ ಎಂದು ಸಚಿವರು ಹೇಳಿದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ 100 ಗಿಗಾವಾಟ್ ಗಳಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ನಿಗದಿಗೊಳಿಸಿದ್ದಾರೆ. ಈ ಗುರಿ ಮುಟ್ಟಲು ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುವ ಜೊತೆಗೆ, ವಿದ್ಯಾರ್ಥಿ ಸಮುದಾಯವನ್ನು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಂವೇದನಾಶೀಲಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಡಿಯ (ಎನ್ ಇಪಿ-2020) ಶಿಕ್ಷಣ ಕ್ರಮದಲ್ಲಿ ಒತ್ತುಕೊಡಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.


ಈ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯ ಅಳವಡಿಕೆಯೊಂದಿಗೆ ಬ್ರಿಗೇಡ್ ಗೇಟ್ ವೇ ಒಕ್ಕೂಟವು ಪರಿಸರ ಸ್ನೇಹಿಯಾಗುವತ್ತ ಮತ್ತೊಂದು ದೃಢವಾದ ಹೆಜ್ಜೆಯನ್ನು ಇರಿಸಿದೆ. ಈ ಮುಂಚೆಯೇ ಇಲ್ಲಿ ನೀರಿನ ಮರುಬಳಕೆ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳನ್ನು ಅಳವಡಿಸಲಾಗಿತ್ತು ಎಂದರು. ಇದೇ ವೇಳೆ, ಇಡೀ ಸಮಾಜಕ್ಕೆ ಮಾದರಿಯಾಗುವಂತೆ ಸ್ವಂತ ಹಣದಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕಾಗಿ ಬ್ರಿಗೇಡ್ ಗೇಟ್ ವೇ ಒಕ್ಕೂಟದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಅಭಿನಂದಿಸಿದರು.
ಬ್ರಿಗೇಡ್ ಗೇಟ್ ವೇ ಒಕ್ಕೂಟದ ಅಧ್ಯಕ್ಷ ಮಹೇಶ್, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಘು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದರಾಜು ಮತ್ತಿತರರು ಇದ್ದರು.

Join Whatsapp
Exit mobile version