ಗಾಂಧಿನಗರ: ತನ್ನ ಶಿಷ್ಯೆ ಮೇಲೆ ಸತತ ಐದು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಿವಾದಿತ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೂಕ್ತ ಸಾಕ್ಷ್ಯಧಾರ ಕೊರತೆಯಿಂದಾಗಿ ಗುಜರಾತ್’ನ ಗಾಂಧಿನಗರದಲ್ಲಿರುವ ನ್ಯಾಯಾಲಯ, ಅಸಾರಾಂ ಪತ್ನಿ ಸೇರಿ ಆರು ಮಂದಿಯನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ.
2013ರಲ್ಲಿ ದಾಖಲಾಗಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಗಾಂಧಿನಗರ ಸೆಷನ್ಸ್ ಕೋರ್ಟ್, ಅಸಾರಾಂ ಬಾಪು ದೋಷಿ ಎಂದು ಸೋಮವಾರ ತೀರ್ಪು ನೀಡಿತ್ತು. ನ್ಯಾಯಾಧೀಶ ಡಿಕೆ ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಕಾಯ್ದಿರಿಸಿದ್ದರು.
“ಅಸಾರಾಂ ಬಾಪು ಅವರಿಗೆ ಅತ್ಯಾಚಾರ ಹಾಗೂ ಅನೈಸರ್ಗಿಕ ಲೈಂಗಿಕತೆಗಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತೆಯ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ಅವರಿಗೆ ಮತ್ತೆ ಒಂದು ವರ್ಷ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ. ಅವರಿಗೆ 10,000 ರೂ ದಂಡ ಹೇರಲಾಗಿದ್ದು, ಅದರ ಜತೆಗೆ ಸಂತ್ರಸ್ತೆಗೆ 50,000 ರೂ ಪರಿಹಾರ ಕೊಡುವಂತೆ ಆದೇಶಿಸಲಾಗಿದೆ” ಎಂದು ಅಸರಾಂ ಪರ ವಕೀಲ ಆರ್ಸಿ ಕೊಡೇಕಾರ್ ತಿಳಿಸಿದ್ದಾರೆ.