Home ಟಾಪ್ ಸುದ್ದಿಗಳು ಸುಪ್ರೀಂ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡ ಅರವಿಂದ ಕೇಜ್ರಿವಾಲ್‌

ಸುಪ್ರೀಂ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡ ಅರವಿಂದ ಕೇಜ್ರಿವಾಲ್‌

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ಗೆ, ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದ ಮಾನಹಾನಿಕರ ಎನ್ನಲಾದ ವಿಡಿಯೊವನ್ನು ಮರುಟ್ವೀಟ್‌ ಮಾಡಿದ್ದನ್ನು ತಪ್ಪೆಂದು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಧ್ರುವ್‌ ರಾಠೀ ಎಂಬವರು ಬಿಜೆಪಿ ಐಟಿ ಸೆಲ್‌ಗೆ ಸಂಬಂಧಿಸಿದಂತೆ ‘ಬಿಜೆಪಿ ಐಟಿ ಸೆಲ್‌ ಪಾರ್ಟ್‌-2’ ಎಂಬ ವಿಡಿಯೊವನ್ನು ಯೂ ಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು. ಕೇಜ್ರಿವಾಲ್‌ ಅದನ್ನು ಮರುಟ್ವೀಟ್‌ ಮಾಡಿದ್ದರು. ವಿಡಿಯೊದಲ್ಲಿ ಮಾನಹಾನಿಕರ ಅಂಶಗಳು ಇವೆ ಎಂದು ಆರೋಪಿಸಿ ವಿಕಾಸ್ ಸಾಂಕೃತ್ಯಾನನ್ ಎಂಬವರು ಕೇಜ್ರಿವಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಅವಹೇಳನಕಾರಿ ವಿಷಯಗಳನ್ನು ಮರುಟ್ವೀಟ್‌ ಮಾಡುವುದು ಕೂಡಾ ಮಾನಹಾನಿ ಕಾನೂನಿನಡಿ ಕ್ರಮಕ್ಕೆ ಅರ್ಹವಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಫೆಬ್ರುವರಿ 5ರ ತನ್ನ ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿದ ಕೇಜ್ರಿವಾಲ್ ‘ಸುಪ್ರೀಂ’ ಮೊರೆ ಹೋಗಿದ್ದರು. ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರಿದ್ದ ಪೀಠವು ನಡೆಸಿತು. ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಕೇಜ್ರಿವಾಲ್‌ ಪರ ಹಾಜರಾದರು.

ಈ ಸಂದರ್ಭದಲ್ಲಿ ದೆಹಲಿ ಸಿಎಂ ತನ್ನಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದನ್ನು ಅವರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. ಕೇಜ್ರಿವಾಲ್‌ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ‘ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸುವಿರಾ’ ಎಂದು ದೂರುದಾರರನ್ನು ಪೀಠವು ಕೇಳಿತು. ಮಾತ್ರವಲ್ಲ, ಕೇಜ್ರಿವಾಲ್‌ ಅವರ ಪ್ರಕರಣವನ್ನು ಮಾರ್ಚ್‌ 11ರವರೆಗೆ ಕೈಗೆತ್ತಿಕೊಳ್ಳಬಾರದು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

Join Whatsapp
Exit mobile version