Home ಟಾಪ್ ಸುದ್ದಿಗಳು ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಿ: ಮಳಲಿ ಮಸೀದಿಯಲ್ಲಿ ತಾಂಬೂಲ ಪ್ರಶ್ನೆಯ ಬಗ್ಗೆ ಡಿಕೆಶಿ ಗರಂ

ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಿ: ಮಳಲಿ ಮಸೀದಿಯಲ್ಲಿ ತಾಂಬೂಲ ಪ್ರಶ್ನೆಯ ಬಗ್ಗೆ ಡಿಕೆಶಿ ಗರಂ

ಬೆಂಗಳೂರು: ಮಳಲಿ ಮಸೀದಿಯ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ‘ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ, ಆದರೆ ಅದನ್ನು ಬೇರೆಯವರ ಮೇಲೆ ಹೇರಬಾರದು ಎಂದು ಹೇಳಿದರು.

ಭವಿಷ್ಯ ಕೇಳುವವರು, ಶಕುನ ಕೇಳುವವರು, ಜ್ಯೋತಿಷ್ಯ ಕೇಳುವವರಿಗೆ ನಾವು ಅಡ್ಡಿ ಮಾಡುವುದಿಲ್ಲ. ಇದೆಲ್ಲವೂ ವೈಯಕ್ತಿಕ ವಿಚಾರವಾಗಿದ್ದು, ಸಾರ್ವಜನಿಕ ವಿಚಾರವಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಾನು ಖಂಡಿಸುತ್ತೇನೆ. ಈ ವಿಚಾರದಲ್ಲಿ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ‘ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ  ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿಜೆಪಿಯವರು ತಮ್ಮ ಭಾವನಾತ್ಮಕ ವಿಚಾರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ ಇದೆ. ಸರ್ಕಾರಿ ಅಧಿಕಾರಿಗಳು ಇದ್ದಾರೆ. ಹೀಗಾಗಿ ಸರಕಾರದ ವಿಚಾರದಲ್ಲಿ ಸಂಘಟನೆಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಇಂತಹ ವಿಚಾರದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ನಾವು ಹೋರಾಡುತ್ತೇವೆ ಎಂದು ನನಗೆ ಅನೇಕ ಕರೆಗಳು ಬರುತ್ತಿವೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ, ಹೀಗಾಗಿ ಈ ವಿಚಾರಕ್ಕೆ ಹೋಗಬೇಡಿ ಎಂದು ನಾನೇ ಸಮಾಧಾನ ಮಾಡುತ್ತಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಹೈಕೋರ್ಟ್ ನೀಡಿರುವ ಸೂಚನೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಡಿಕೆಶಿ,  ‘ನಾವು ಚುನಾವಣೆಯನ್ನು ಎಂದೂ ಬೇಡ ಎನ್ನುವುದಿಲ್ಲ. ಆದರೆ ಮೊದಲು ಸಾಮಾಜಿಕ ನ್ಯಾಯ ಸಿಗಬೇಕು. ಸಂವಿಧಾನದ ಆಶಯದಂತೆ ಜನರಿಗೆ ಅಧಿಕಾರ ಕೊಡಬೇಕು. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗಬಾರದು. ಇದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದೆ. ಆದರೆ ಸಾಮಾಜಿಕ ನ್ಯಾಯ ಕಡೆಗಣಿಸಿ ಎಂದು ಹೇಳಿಲ್ಲ ಎಂದರು.

ಮೇಕೆದಾಟು ಹೋರಾಟದಲ್ಲಿ ನಿಯಮ ಉಲ್ಲಂಘನೆ ಕುರಿತು ನೋಟಿಸ್ ಜಾರಿಯ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ನಾವು ನ್ಯಾಯಾಲಯಕ್ಕೆ ಗೌರವ ನೀಡಬೇಕು, ಖಂಡಿತ ನೀಡುತ್ತೇವೆ. ಆದರೆ ಕೇವಲ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಿಜೆಪಿಯವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಚಿವರ ಕಾರ್ಯಕ್ರಮಗಳು ಸರ್ಕಾರದ ಕಾರ್ಯಕ್ರಮ ಹಾಗೂ ಬಿಜೆಪಿ ನಾಯಕರ ಹುಟ್ಟುಹಬ್ಬ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಆರೋಪಿಸಿದರು.

Join Whatsapp
Exit mobile version