Home ಕರಾವಳಿ ಸುಳ್ಯದ ಹತ್ಯೆ ಘಟನೆಯಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಅಮಾಯಕರ ಬಂಧನ: ಪಾಪ್ಯುಲರ್ ಫ್ರಂಟ್

ಸುಳ್ಯದ ಹತ್ಯೆ ಘಟನೆಯಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಅಮಾಯಕರ ಬಂಧನ: ಪಾಪ್ಯುಲರ್ ಫ್ರಂಟ್

ಮಂಗಳೂರು: ಇತ್ತೀಚೆಗೆ ಸುಳ್ಯದಲ್ಲಿ ನಡೆದ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಸುತ್ತಿರುವ ಬಂಧನ ಕಾರ್ಯಾಚರಣೆಯು ಖಂಡಖಂಡನಾರ್ಹವಾಗಿದೆ. ಬಿಜೆಪಿ ಸರ್ಕಾರದ ಒತ್ತಡದಲ್ಲಿ ಪೊಲೀಸರು ಅಮಾಯಕರನ್ನು ಭೇಟಿಯಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.

ಇಂದು ಕೋಸ್ಟಲ್ ಕಾನ್ಫರೆನ್ಸ್ ಹಾಲ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ PFI ದ.ಕ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಸಂಘಪರಿವಾರದ ಯಾವುದೇ ಕಾರ್ಯಕರ್ತರ ಹತ್ಯೆ ನಡೆದಾಗಲೂ ಬಿಜೆಪಿ ಸಂಸದರು, ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು, ಪಾಪ್ಯುಲರ್ ಫ್ರಂಟ್ ಮೇಲೆ ಆರೋಪ ಹೊರಿಸುವುದು, ನಂತರ ಜಿಲ್ಲೆಯ ಪೊಲೀಸರು ಅಮಾಯಕ ಮುಸ್ಲಿಮ್ ಯುವಕರನ್ನು ರಾತ್ರೋರಾತ್ರಿ ವಿಚಾರಣೆಯ ನೆಪದಲ್ಲಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸುವುದು ವಾಡಿಕೆಯಾಗಿ ಬಿಟ್ಟಿದೆ. ಘಟನೆ ನಡೆದ ಮರುಕ್ಷಣದಲ್ಲಿ ಅದರಲ್ಲೂ ವಿಶೇಷವಾಗಿ ಪೊಲೀಸರ ಪ್ರಾಥಮಿಕ ತನಿಖೆ ಪೂರ್ಣಗೊಳ್ಳುವ ಮುನ್ನವೇ ಬಿಜೆಪಿ ನಾಯಕರು ದ್ವೇಷದ ಹೇಳಿಕೆ ನೀಡಿ ಪರಿಸ್ಥಿತಿಯನ್ನು ಪ್ರಕ್ಷ್ಯುಬ್ಧಗೊಳಿಸಿಬಿಡುತ್ತಾರೆ. ನಂತರ ಪೊಲೀಸರ ತನಿಖೆಯೂ ರಾಜಕೀಯಪ್ರೇರಿತವಾಗಿಯೇ ಸಾಗುತ್ತದೆ ಎಂದು ತಿಳಿಸಿದರು.

ಸುಳ್ಯದ ಘಟನೆಯಲ್ಲಂತೂ ಸ್ವಪಕ್ಷೀಯ ಕಾರ್ಯಕರ್ತರೇ ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ಕಾಣಲು ಸಾಧ್ಯವಾಯಿತು. ಇದೀಗ ಸರಕಾರದ ಗಂಭೀರ ಆಡಳಿತ ವೈಫಲ್ಯ ಮುಚ್ಚಿಹಾಕಲು ಮತ್ತು ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ಆಕ್ರೋಶವನ್ನು ಹೇಗಾದರೂ ತಣಿಸುವುದು ಬಿಜೆಪಿಗೆ ಅಗತ್ಯವಾಗಿ ಬಿಟ್ಟಿದೆ. ಜೊತೆಗೆ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿಯವರೂ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸುಳ್ಯದಲ್ಲಿ ನಡೆದ ಹತ್ಯೆ ಘಟನೆ ಬಳಿಕ ಬಿಜೆಪಿಯ ಶವ ರಾಜಕೀಯವನ್ನು ಟೀಕಿಸಿ ಹಿಂದುಗಳಿದ ವರ್ಗಗಳ ನಾಯಕರ ಜಾಗೃತಿ ಮೂಡಿಸುವ ಹಲವಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದೆಲ್ಲವೂ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಮುಳುವಾಗಿ ಪರಿಣಮಿಸಲಿದೆ ಎಂಬುದು ಮನವರಿಕೆಯಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಸೂಚನೆಯ ಮೇರೆಗೆ ತರಾತುರಿಯಲ್ಲಿ ವಿಚಾರಣೆಯ ನೆಪದಲ್ಲಿ ಕೊಂಡೊಯ್ದು ಘಟನೆಯಲ್ಲಿ ಅಮಾಯಕರನ್ನು ಸಿಲುಕಿಸುತ್ತಿರುವುದು ಬಹಳ ಸ್ಪಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು.

ಸಂಘಪರಿವಾರದ ಕಾರ್ಯಕರ್ತರ ಕೊಲೆ ಘಟನೆಗಳು ನಡೆದಾಗ, ಪ್ರತಿಬಾರಿಯೂ ಬಿಜೆಪಿ ನಾಯಕರು ಸ್ವತಂತ್ರ ತನಿಖೆಗೆ ಅವಕಾಶ ಮಾಡಿಕೊಡದೇ ಇತರ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಸಂಘಪರಿವಾರದ ಕಾರ್ಯಕರ್ತರೇ ಅರೋಪಿಗಳಾಗಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿತ್ತು. ಸುಳ್ಯದ ಘಟನೆಯಲ್ಲೂ ಅವರು ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ಕಾರ್ತಿಕ್ ರಾಜ್, ಹರೀಶ್ ಪೂಜಾರಿ, ನಂದಿತಾ ಮತ್ತಿತರರ ಹತ್ಯೆ ನಡೆದಾಗಲೂ ಬಿಜೆಪಿ ನಾಯಕರು ಘಟನೆ ನಡೆದಾಕ್ಷಣ ಪಿ.ಎಫ್.ಐ ಹೆಸರನ್ನೇ ತೇಲಿಬಿಟ್ಟಿದ್ದರು. ಇದೇ ದಿಕ್ಕಿನಲ್ಲಿ ತನಿಖೆ ನಡೆಸಿದ್ದ ಪೊಲೀಸರು ಪಿ.ಎಫ್.ಐ ಕಾರ್ಯಕರ್ತರನ್ನು ಚಿತ್ರಹಿಂಸೆಗೂ ಗುರಿಪಡಿಸಿದ್ದರು. ಆದರೆ ಪೊಲೀಸರ ತನಿಖೆ ಮುಗಿಯುವ ಹೊತ್ತಿಗೆ ಆ ಘಟನೆಗಳಲ್ಲಿ ಸಂಘಪರಿವಾರದ ಕಾರ್ಯಕರ್ತರ ಹೆಸರು ಬಹಿರಂಗವಾಗಿತ್ತು. ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಾಗಲೂ ಈಶ್ವರಪ್ಪರಂತಹ ನಾಯಕರು ಘಟನೆಯಲ್ಲಿ ಪಿ.ಎಫ್.ಐ ಕೈವಾಡವಿದೆ ಎಂದು ಪ್ರಚೋದಿಸಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಹರ್ಷ ಓರ್ವ ರೌಡಿಶೀಟರ್ ಆಗಿದ್ದ ಎಂಬುದು ತಿಳಿದು ಬಂದಿತ್ತು ಮತ್ತು ಆ ಕೊಲೆ ಪರಸ್ಪರ ವೈಷಮ್ಯದಿಂದ ನಡೆದ ಕೊಲೆಯಾಗಿತ್ತು ಎಂಬುದು ನಂತರ ಬಹಿರಂಗವಾಗಿತ್ತು ಎಂದು ಅವರು ದೂರಿದ್ದಾರೆ.

ಸುಳ್ಯ ಘಟನೆಗೆ ಸಂಬಂಧಿಸಿ ಬಂಧಿತರಾಗಿರುವ ಯುವಕರ ಕುಟುಂಬಸ್ಥರ ಹೇಳಿಕೆಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಪೊಲೀಸರ ತನಿಖೆಯನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಅವರ ಅಮಾಯಕತೆ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ. ಬಂಧಿತ ಇಬ್ಬರು ಯುವಕರೂ ಅಮಾಯಕರಾಗಿದ್ದು, ಪೊಲೀಸರು ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಶವ ರಾಜಕೀಯದ ಭಾಗವಾಗಿ ಬಿಜೆಪಿ ನಾಯಕರು ಶವ ಮೆರವಣಿಗೆ ನಡೆಸುವುದು, ಮೆರವಣಿಗೆ ಉದ್ದಕ್ಕೂ ಗಲಭೆ ಎಬ್ಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಶಿವಮೊಗ್ಗದಲ್ಲಿ ರೌಡಿಶೀಟರ್ ಹರ್ಷನ ಹತ್ಯೆ ನಡೆದಾಗಲೂ ಶಿವಮೊಗ್ಗದ ಕೆಲವು ಕಡೆಗಳಲ್ಲಿ ಬೆಂಕಿ ಹಚ್ಚಲಾಯಿತು. ನಿನ್ನೆ ಸುಳ್ಯದಲ್ಲೂ ಕುಟುಂಬಸ್ಥರ ವಿರೋಧದ ಹೊರತಾಗಿಯೂ ಶವ ಮೆರವಣಿಗೆ ನಡೆಸಲಾಯಿತು. ರಸ್ತೆ ಉದ್ದಕ್ಕೂ ಭೀತಿಯ ವಾತಾವರಣ ಸೃಷ್ಟಿಸಲಾಯಿತು. ಅಂಗಡಿ, ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಸಾರ್ವಜನಿಕ ಸಂಪತ್ತಿಗೂ ಹಾನಿ ಉಂಟು ಮಾಡಲಾಯಿತು. ಪೊಲೀಸರನ್ನೂ ಅವಾಚ್ಯವಾಗಿ ನಿಂದಿಸಲಾಯಿತು. ಆದರೆ ಇದರ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ಯಾವುದೇ ವರದಿ ಇಲ್ಲ. ಗಲಭೆ ನಡೆಸುವ ಇಂತಹ ಘಟನೆಗಳ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದು ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಪೊಲೀಸ್ ಇಲಾಖೆ ಬಿಜೆಪಿಯ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಅಮಾಯಕ ಮುಸ್ಲಿಮರನ್ನು ಗುರಿಪಡಿಸದೇ, ನೈಜ ಆರೋಪಿಗಳನ್ನು ಬಂಧಿಸಬೇಕು. ಹತ್ಯೆಗೊಳಗಾದ ಪ್ರವೀಣ್ ತಂದೆಯೂ ಕೆಲವೊಂದು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಅವರ ಹೇಳಿಕೆಯ ಆಯಾಮದಲ್ಲಿಯೂ ತನಿಖೆ ನಡೆಸಬೇಕಾಗಿದೆ. ಜೊತೆಗೆ ಶವಯಾತ್ರೆಯ ಹೆಸರಿನಲ್ಲಿ ಸಾರ್ವಜನಿಕ ಸೊತ್ತಿಗೆ ಹಾನಿ ಉಂಟು ಮಾಡಿದ ಮತ್ತು ಗಲಭೆ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಕಿಡಿಗೇಡಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಅದೇ ರೀತಿ ಹತ್ಯೆ ಘಟನೆಗಳಲ್ಲಿ ಪ್ರತಿಬಾರಿಯೂ ಪೂರ್ವಾಗ್ರಹಪೀಡಿತ ತನಿಖೆಗಳೇ ಎದ್ದು ಕಾಣುತ್ತಿದ್ದು, ಈ ನಿಟ್ಟನಲ್ಲಿ ಸುಳ್ಯದಲ್ಲಿ ನಡೆದ ಹತ್ಯೆ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುತ್ತದೆ ಎಂದು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಮಾತನಾಡಿ, ಪ್ರಸಕ್ತವಾಗಿ ನಡೆಯುತ್ತಿರುವ ಕೊಲೆಯನ್ನು ಪಾಪ್ಯುಲರ್ ಫ್ರಂಟ್ ತಲೆಗೆ ಕಟ್ಟಲಾಗುತ್ತಿದೆ. ಇತ್ತೀಚೆಗೆ ನಡೆದ ಮಸೂದ್ ಎಂಬಾತನ ಕೊಲೆಯಲ್ಲಿ ಇಲ್ಲಿನ ಮಾಧ್ಯಮ, ಸರ್ಕಾರ ಗಾಢ ಮೌನವಾಗಿದ್ದು, ಆರೋಪಿಗಳು ಪ್ರತಿನಿಧಿಸುವ ಸಂಘಟನೆಯ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸಂಘಪರಿವಾರದ ಕಾರ್ಯಕರ್ತನ ಕೊಲೆ ನಡೆದಾಗ ಪಾಪ್ಯುಲರ್ ಫ್ರಂಟ್’ನೊಂದಿಗೆ ಮೆಲುಕು ಹಾಕುವುದು ಖಂಡನೀಯ. ಸುಳ್ಳದಲ್ಲಿ ನಡೆದ ಪ್ರವೀಣ್ ಎಂಬಾತನ ಕೊಲೆಯಲ್ಲಿ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ಮತ್ತು ಸಮುದಾಯವನ್ನು ಗುರಿಪಡಿಸುವುದನ್ನು ನಿಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version