ದುಬೈಯಿಂದ ಬರುತ್ತಿದ್ದ ವಿಮಾನದಲ್ಲಿ ಮದ್ಯ ಸೇವಿಸಿ ಗಲಾಟೆ: ಇಬ್ಬರ ಬಂಧನ

Prasthutha|

ಮುಂಬೈ: ದುಬೈ-ಮುಂಬೈ ಇಂಡಿಗೋ ಏರ್‌ಲೈನ್ಸ್’ನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಪ್ರಯಾಣಿಕರು ವಿಮಾನ ಹಾರಾಟದಲ್ಲಿದ್ದ ವೇಳೆ ಗಲಾಟೆ ಸೃಷ್ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಿಗೂ ಕಿರಿಕಿರಿಯುಂಟು ಮಾಡಿದ್ದರು. ಏರ್ ಲೈನ್ ಸಿಬ್ಬಂದಿಯ ದೂರಿನ ಮೇರೆಗೆ ಎಫ್’ಐಆರ್ ದಾಖಲಿಸಿ ಪಾಲ್ಘರ್ ಜಿಲ್ಲೆಯ ಜಾನ್ ಜಿ ಡಿಸೋಜಾ (49) ಮತ್ತು ಕೊಲ್ಲಾಪುರದ ಮಾನ್ಬೆಟ್ನ ದತ್ತಾತ್ರೇಯ ಬಾಪರ್ಡೇಕರ್ (47) ಎಂಬವರನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಇಬ್ಬರಿಗೂ ಜಾಮೀನು ನೀಡಲಾಯಿತು. ಇಬ್ಬರೂ ದುಬೈನಲ್ಲಿ ಒಂದು ವರ್ಷ ಕೆಲಸ ಮಾಡಿ ಭಾರತಕ್ಕೆ ಮರಳುತ್ತಿದ್ದಾಗ ಹಾರಾಡುತ್ತಿದ್ದ ವಿಮಾನದಲ್ಲೇ ಸುಂಕ ರಹಿತ ಅಂಗಡಿಯಿಂದ ತಂದಿದ್ದ ಮದ್ಯ ಸೇವಿಸಿ ಸಂಭ್ರಮಿಸಲು ಆರಂಭಿಸಿದರು ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ವ್ಯಕ್ತಿಗಳ ಗದ್ದಲವನ್ನು ಸಹ ಪ್ರಯಾಣಿಕರು ವಿರೋಧಿಸಿದಾಗ ಪ್ರತಿರೋಧ ತೋರಿದ ವೇಳೆ ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ತಮ್ಮ ಬಾಟಲಿಗಳನ್ನು ತೆಗೆದುಕೊಂಡು ಹೋದಾಗ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಮತ್ತು ವಿಮಾನ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಎಫ್’ಐಆರ್ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ವರ್ಷ ಇದು ವಿಮಾನದಲ್ಲಿ ನಡೆದ ಏಳನೇ ಘಟನೆಯಾಗಿದ್ದು, ಪ್ರಯಾಣಿಕರ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -