Home ಟಾಪ್ ಸುದ್ದಿಗಳು ಸೈಬರ್ ವಂಚಕರಿಗೆ ನಕಲಿ ಸಿಮ್ ಕಾರ್ಡ್ ನೀಡುತ್ತಿದ್ದ ಇಬ್ಬರು ಏರ್ ಟೆಲ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳ...

ಸೈಬರ್ ವಂಚಕರಿಗೆ ನಕಲಿ ಸಿಮ್ ಕಾರ್ಡ್ ನೀಡುತ್ತಿದ್ದ ಇಬ್ಬರು ಏರ್ ಟೆಲ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳ ಬಂಧನ

ಬೆಂಗಳೂರು: ಸೈಬರ್ ವಂಚಕರಿಗೆ ನಕಲಿ ಸಿಮ್  ಕಾರ್ಡ್ ಗಳನ್ನು  ನೀಡಿ ಅವರ ವಂಚನೆಗೆ ಸಹಕರಿಸುತ್ತಿದ್ದ ಇಬ್ಬರು ಏರ್ಟೆಲ್ ಮಾರಾಟ ಪ್ರತಿನಿಧಿ ( ಸೇಲ್ಸ್ ಎಕ್ಸಿಕ್ಯೂಟಿವ್ ) ಗಳನ್ನು  ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಹರ್ಷ(24), ಚಿಕ್ಕಬ್ಯಾಲಕೆರೆಯ ಚೇತನ್.ಎಸ್.(27) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಸೈಬರ್ ವಂಚನೆ ಸಂಬಂಧಿಸಿದಂತೆ ರಾಜೇಶ್ವರ್ ಎಂಬಾತನನ್ನು ಬಂಧಿಸಿ  ತನಿಖೆ ಕೈಗೊಂಡಾಗ ಆತ ನೀಡಿದ ಮಾಹಿತಿಯನ್ನು ಆಧರಿಸಿ ನಕಲಿ ಸಿಮ್  ಕಾರ್ಡ್ ಗಳನ್ನು  ನೀಡಿ ವಂಚನೆ ನಡೆಸುತ್ತಿದ್ದ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಕರಣದ ದೂರುದಾರನ ಪುತ್ರಿಗೆ ರೆವಾ ಕಾಲೇಜಿನಲ್ಲಿ ಇಂಜಿನಿಯರ್ ನ ಇ.ಸಿ.ಎಮ್ ವಿಭಾಗ ಸಿಕ್ಕಿತ್ತು. ಆದರೆ ಅವರಿಗೆ ಕಂಪ್ಯೂಟರ್ ವಿಭಾಗದ ಸೀಟ್ ಬೇಕಾಗಿತ್ತು. ಇದನ್ನು ತಿಳಿದು ಕಳೆದ ಜ.8 ರಂದು ದೂರುದಾರರ ಪುತ್ರಿಗೆ ರೆವಾ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಸೀಟ್ ಕೊಡಿಸುವುದಾಗಿ ಎಸ್.ಎಮ್.ಎಸ್ ಕಳುಹಿಸಲಾಗಿತ್ತು. ಇದನ್ನು ನಂಬಿದ ದೂರುದಾರರು ಆರೋಪಿಯು ಎಸ್ ಎಮ್ ಎಸ್ ನಲ್ಲಿ ನೀಡಿದ್ದ ಮೊಬೈಲ್ ನಂಬರ್ ಸಂಪರ್ಕಿಸಿದ್ದು ಆರೋಪಿಯ ಮಾತುಗಳನ್ನು ನಂಬಿ  1,27,500 ರೂಗಳನ್ನು ನೀಡಿದ್ದರು. ಬಳಿಕ ಆರೊಪಿಯು ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಅನುಮಾನಗೊಂಡು ದೂರುದಾರರು ಕಾಲೇಜಿಗೆ ಹೋಗಿ ಎಸ್.ಎಮ್.ಎಸ್ ಬಗ್ಗೆ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿತ್ತು.

ಈ ಸಂಬಂಧಿಸಿದಂತೆ ದಾಖಲಾದ  ಪ್ರಕರಣದ ಬೆನ್ನತ್ತಿದ್ದ ಈಶಾನ್ಯ ವಿಭಾಗದ ಪೊಲೀಸರು, ಕಳೆದ ಜ. 28 ರಂದು ಪ್ರಮುಖ ಆರೋಪಿ ರಾಜೇಶ್ವರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಹಲವರಿಗೆ  ವಂಚಿಸಿ ಹಣ ಸಂಪಾದನೆ ಮಾಡಿರುವುದು ಪತ್ತೆಯಾಯಿತು.

ಅವುಗಳಲ್ಲಿ  ದಯಾನಂದ ಸಾಗರ್ ನ ಮೂವರು  ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದು ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಆರೋಪಿಯಿಂದ 120 ಗ್ರಾಂ ಚಿನ್ನ 7 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಸಾರ್ವಜನಿಕರಿಗೆ ವಂಚಿಸಲು ಕರೆಮಾಡುತ್ತಿದ್ದ ಸಿಮ್ ಕಾರ್ಡ್ ನೀಡುತ್ತಿದ್ದರು. ಇಂದು ಬೆಳಿಗ್ಗೆ ಹರ್ಷ ಹಾಗೂ ಚೇತನ್ ನನ್ನು ಬಂಧಿಸಿ ವಿಚಾರಣೆ ನಡಸಿದಾಗ ಆರೋಪಿಗಳು ಏರ್ ಟೆಲ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು ಇವರ ಬಳಿ ಗ್ರಾಹಕರು ಸಿಮ್ ಖರೀದಿಗೆ ಬಂದಾಗ ಅವರ ಬಳಿ ಒಂದು

ಫಾರಂ ಗಿಂತ ಹೆಚ್ಚು ಫಾರಂಗಳಿಗೆ ಸಹಿ ಪಡೆದು, ಅವರ ಬಳಿ ಒಂದಕ್ಕಿಂತ ಹೆಚ್ಚು ಪೋಟೋಗಳನ್ನು ಪಡೆದು ನಂತರ ಅವರ ಬಳಿ ಒಂದಕ್ಕಿಂತ ಹೆಚ್ಚು ಬೆರಳು ಮುದ್ರೆಗಳನ್ನು ಪಡೆಯುತ್ತಿದ್ದು, ಒಂದು ಸಿಮ್ ಕಾರ್ಡ್ ಅನ್ನು ಗ್ರಾಹಕರಿಗೆ ನೀಡಿ ಉಳಿದ ಸಿಮ್ ಕಾರ್ಡ್ಗಳನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

Join Whatsapp
Exit mobile version