ಯುವತಿಯ ಜೊತೆ ಮಾತನಾಡಿದ ಯುವಕನ ಕೊಂದು ಹೂತು ಹಾಕಿದ್ದ ಆರೋಪಿಗಳ ಬಂಧನ

Prasthutha|

ಹಾಸನ: ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಆತನ ಸ್ನೇಹಿತರ ಕುಟುಂಬಸ್ಥರು ಕೊಲೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

- Advertisement -

ಅಂಬೇಡ್ಕರ್ ನಗರದ ಅನಿಲ್ ರಾಜ್ (22) ಕೊಲೆಯಾದವರು. ಪ್ರಕರಣ ಸಂಬಂಧ ಆರೋಪಿಗಳಾದ ಪ್ರಸಾದ್, ಜಯಲಕ್ಷ್ಮಿ, ಪ್ರಿಯ, ಮತ್ತು ಮೋಹನ್ ಎಂಬವರನ್ನು ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಾ.14ರಂದು ರಾತ್ರಿ ಸ್ನೇಹಿತ ಪ್ರಜ್ವಲ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೃತ ಅನಿಲ್ರಾಜ್ ಹಾಗೂ ಸ್ನೇಹಿತ ಪ್ರಸಾದ್ ಭಾಗಿಯಾಗಿದ್ದರು. ಪಾರ್ಟಿಯಿಂದ ವಾಪಸ್ ಆಗುತ್ತಿದ್ದ ಅನಿಲ್ ರಾಜ್ ನನ್ನು ಪ್ರಸಾದ್ ಕುಟುಂಬಸ್ಥರು ಅಡ್ಡಗಟ್ಟಿದ್ದಾರೆ.

- Advertisement -

ಆರೋಪಿ ಪ್ರಸಾದ್ ತಂಗಿ ಜೊತೆ ಅನಿಲ್ ರಾಜ್ ಫೋನ್ ನಲ್ಲಿ ಮಾತನಾಡುತ್ತಿದ್ದ ವಿಷಯದಲ್ಲಿ ಅವರ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೇರಿದ್ದು, ಅನಿಲ್ ರಾಜ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅನಿಲ್ ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿಗಳು ಅನಿಲ್ ಮೃತದೇಹವನ್ನು ತಮ್ಮ ಮನೆಯ ಹಿಂಭಾಗದಲ್ಲಿ ಹೂತು ಹಾಕಿದ್ದರು.

ಇತ್ತ ಅನಿಲ್ ರಾಜ್ ಪೋಷಕರು ತಡರಾತ್ರಿಯಾದರೂ ಮನೆಗೆ ಬಾರದ ಮಗನನ್ನು ಹುಡುಕಿಕೊಂಡು ಹೊರಟಿದ್ದು, ಗಲಾಟೆ ನಡೆದಿದ್ದ ವಿಷಯ ತಿಳಿದು ಪ್ರಸಾದ್ ಮನೆ ಸಮೀಪ ಹುಡುಕಾಡಿದ್ದಾರೆ. ಈ ವೇಳೆ ಶವ ಹೂತಿದ್ದ ಪ್ರದೇಶದಲ್ಲಿ ಮೃತನ ಕೈಬೆರಳುಗಳು ಹೊರಗೆ ಕಾಣುತ್ತಿದ್ದು, ಅನಿಲ್ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಸಕಲೇಶಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ಧಾರೆ.

Join Whatsapp
Exit mobile version