Home ಕರಾವಳಿ ಸುಳ್ಳು ಕೇಸ್ ಹಾಕಿ ಪಿಎಫ್ ಐ ನಾಯಕರ ಬಂಧಿಸಿರುವುದು “ಭಿನ್ನ ಧ್ವನಿ ಮುಕ್ತ ಭಾರತ”ದ ಮುಂದುವರಿದ...

ಸುಳ್ಳು ಕೇಸ್ ಹಾಕಿ ಪಿಎಫ್ ಐ ನಾಯಕರ ಬಂಧಿಸಿರುವುದು “ಭಿನ್ನ ಧ್ವನಿ ಮುಕ್ತ ಭಾರತ”ದ ಮುಂದುವರಿದ ಭಾಗ: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್

ಪುತ್ತೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ನೂರಕ್ಕೂ ಅಧಿಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮನೆಗೆ ಮಧ್ಯ ರಾತ್ರಿ ಮತ್ತು ಕಚೇರಿಗಳಿಗೆ ಬಿಜೆಪಿ- ಸಂಘಪರಿವಾರ ಪ್ರಾಯೋಜಿತ NIA, ED ದಾಳಿ ನಡೆಸಿ ಸುಳ್ಳು ಆರೋಪ ಹೊರಿಸಿ UAPA ಸೇರಿದಂತೆ ಹಲವು ಕಠಿಣ ಸೆಕ್ಷನ್ ಗಳನ್ನು ಹಾಕಿ ಬಂಧನ ನಡೆಸಿರುವುದು ಖಂಡನೀಯ ಹಾಗೂ ಇದು ಸಂಘಪರಿವಾರ ಬಿಜೆಪಿಯ “ಭಿನ್ನ ಧ್ವನಿ ಮುಕ್ತ” ಭಾರತದ ಮುಂದುವರಿದ ಭಾಗ ಎಂದು ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದೆ.


ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸರ್ಕಾರದ ತಪ್ಪು ಗಳನ್ನು ಎತ್ತಿ ತೋರಿಸುವ ಪ್ರತಿಭಟಿಸುವ ಮತ್ತು ನ್ಯಾಯಕ್ಕಾಗಿ ಆಗ್ರಹ ಮಾಡುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ದಾಳಿ ನಡೆಸುವ ಮೂಲಕ ಭಿನ್ನ ಧ್ವನಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಪರಿಷತ್ ಹೇಳಿದೆ.


ಕರ್ನಾಟಕದಿಂದ ಬಂಧಿಸಿರುವ ಕೆಲವು ನಾಯಕರ ಮೇಲೆ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆಯ ಆರೋಪ ಹೊರಿಸಲಾಗಿದೆ. ಆದರೆ ಆ ಘಟನೆ ನಡೆದು ಎರಡು ವರ್ಷಗಳಾಯಿತು. ಒಂದು ವೇಳೆ ಇವರ ಪಾತ್ರ ಇರುತ್ತಿದ್ದರೆ ಯಾಕಾಗಿ ಅಂದೇ ಬಂಧಿಸಿಲ್ಲ? ಆ ಘಟನೆ ನಡೆದ ನಂತರವೂ ಸಂಘಟನೆಯ ನಾಯಕರು ಬೇರೆಬೇರೆ ವಿಚಾರಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದವರಾಗಿದ್ದಾರೆ. ಬೇರೆಬೇರೆ ಭಾಗಗಳಿಂದ ಬಂಧಿಸಿದ ನಾಯಕರ ಪರಿಸ್ಥಿತಿ ಇದೇ ರೀತಿಯಾಗಿದೆ. ಹೀಗಿರುವಾಗ ರಾತ್ರೋರಾತ್ರಿ ದರೋಡೆಕೋರರಂತೆ ಮನೆಗೆ ಮತ್ತು ಕಚೇರಿಗೆ ದಾಳಿ ನಡೆಸಿ ಪರಿಶೀಲನೆಯ ಹೆಸರಿನಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ನಡೆಸಿ ಮತ್ತು ಕಛೇರಿಗಳ ಬಾಗಿಲು ಗ್ಲಾಸ್ ಒಡೆಯುವ ಔಚಿತ್ಯವೇನಿತ್ತು? ಎಂದು ಪರಿಷತ್ ಪ್ರಶ್ನಿಸಿದೆ.


ದೇಶಾದ್ಯಂತ ಸಂವಿಧಾನ ಬದ್ಧವಾಗಿ ಕಾರ್ಯಾಚರಿಸುವ ಒಂದು ಚಳುವಳಿಯ ಸಮೂಹವನ್ನು ಪ್ರಚೋದಿಸಿ ದೇಶದಲ್ಲಿ ಸರ್ಕಾರಿ ಪ್ರಾಯೋಜಿತ ಅರಾಜಕತೆ ಸೃಷ್ಟಿಸುವ ಕೃತ್ಯವಾಗಿದೆ. ಆ ಮೂಲಕ ಮುಸ್ಲಿಮ್ ಸಮುದಾಯದ ಯುವಕರ ವಿರುದ್ಧ ಇನ್ನಷ್ಟು ಪ್ರಕರಣಗಳನ್ನು ದಾಖಲಿಸಿ ಶಾಶ್ವತವಾಗಿ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಹುನ್ನಾರವಾಗಿದೆ ಎಂದು ಪರಿಷತ್ ಆರೋಪಿಸಿಎ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತನ್ನ ವಿರೋಧಿಗಳನ್ನು ಮಣಿಸಲು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಂದೋ ಬಿಜೆಪಿ ಸೇರಿ ಇಲ್ಲ ಜೈಲು ಸೇರಿ ಎಂಬ ನೀತಿಯನ್ನು ಅಳವಡಿಸಿಕೊಂಡು ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇದರ ಭಾಗವಾಗಿದೆ ಇತರ ಪಕ್ಷಗಳಿಂದ ಹಾಲಿ ಮಾಜಿ ಶಾಸಕರು,ಸಚಿವರುಗಳು ಬಿಜೆಪಿ ಗೆ ವಲಸೆ ಹೋಗುತ್ತಿರುವುದು. ಬಿಜೆಪಿಯ ಬೆದರಿಕೆಗೆ ಬಗ್ಗದ ಪಿಎಫ್ ಐಯನ್ನು ಸರ್ಕಾರ ಗುರಿಪಡಿಸಿರುವುದರ ಮುಂದುವರಿದ ಭಾಗವಾಗಿದೆ ಈ ದಾಳಿ ಮತ್ತು ಬಂಧನ. ಬಿಜೆಪಿಯ ಈ ನಡೆಯ ವಿರುದ್ಧ ಆಶಯ, ಸೈದ್ಧಾಂತಿಕ ಹಾಗೂ ಪಕ್ಷ ಭೇದ ಮರೆತು ಪಿಎಫ್ ಐ ಸಂಘಟನೆಯೊಂದಿಗೆ ನಿಲ್ಲಬೇಕಾಗಿದೆ ಹಾಗೂ ಈ ಅನ್ಯಾಯದ ವಿರುದ್ಧ ಹೋರಾಡಬೇಕಾಗಿದೆ ಎಂದು ಪರಿಷತ್ ಹೇಳಿದೆ.


ಸರ್ಕಾರವು ಕೂಡಲೇ ಬಂಧಕತ ನಾಯಕರನ್ನು ಬಿಡುಗಡೆ ಗೊಳಿಸಬೇಕು. ಇಲ್ಲದಿದ್ದಲ್ಲಿ ಜನಸಾಮಾನ್ಯರನ್ನು ಸೇರಿಸಿಕೊಂಡು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ದ.ಕ ಜಿಲ್ಲಾ ಮುಸ್ಲಿಂ ಪರಿಷತ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದೆ.

Join Whatsapp
Exit mobile version