ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅರ್ನಾಬ್ ಗೋಸ್ವಾಮಿ, ಕಂಗನಾ ರಾಣಾವತ್ ವಿರುದ್ಧ ಹಕ್ಕುಚ್ಯುತಿ ಮಂಡನೆ

ಮುಂಬೈ : ಮಹಾರಾಷ್ಟ್ರ ವಿಧಾನಸಭೆಯ ಉಭಯ ಸದನಗಳಲ್ಲಿ ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ರಾಣಾವತ್ ವಿರುದ್ಧ ಶಿವಸೇನೆ ಹಕ್ಕುಚ್ಯುತಿ ಮಂಡನೆ ಮಾಡಿದೆ. ಮುಂಬೈಯನ್ನು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ಕ್ಕೆ ಹೋಲಿಕೆ ಮಾಡಿರುವ ಕಂಗನಾ ವಿರುದ್ಧ ವಿಧಾನಪರಿಷತ್ ನಲ್ಲಿ ಹಕ್ಕುಚ್ಯುತಿ ಮಂಡನೆಯಾಗಿದೆ. ಇದೇ ವೇಳೆ ಅರ್ನಾಬ್ ವಿರುದ್ಧ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಹಕ್ಕುಚ್ಯುತಿ ಮಂಡನೆಯಾಗಿದೆ.

ಶಿವಸೇನೆ ಶಾಸಕ ಪ್ರತಾಪ್ ಸರ್ನೈಕ್ ವಿಧಾನಸಭೆಯಲ್ಲಿ ಗೋಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ಅಗೌರವಯುತ ಹೇಳಿಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯ ಆರೋಪ ಮಾಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಅವರು ಈ ಹಕ್ಕುಚ್ಯುತಿ ಮಂಡನೆಗೆ ಅನುಮೋದನೆ ಸೂಚಿಸಿದರು. ಬಿಜೆಪಿ ಶಾಸಕರ ಘೋಷಣೆ, ಪ್ರತಿರೋಧದ ನಡುವೆಯೂ ಅರ್ನಾಬ್ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿದೆ. ಎನ್ ಸಿಪಿ ಕೂಡ ಪ್ರಸ್ತಾಪವನ್ನು ಬೆಂಬಲಿಸಿದೆ. ಬಿಜೆಪಿಯ ವಿರೋಧದ ಹಿನ್ನೆಲೆಯಲ್ಲಿ ಮೂರು ಬಾರಿ ಸದನ ಮುಂದೂಡಲಾಯಿತು.

- Advertisement -

ಅದೇ ರೀತಿ ವಿಧಾನ ಪರಿಷತ್ ನಲ್ಲಿ ಶಿವಸೇನೆಯ ಮನೀಶಾ ಕಾಯಂಡೆ ಅವರು, ಗೋಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು. ಇದೇ ವೇಳೆ, ಮುಂಬೈಯನ್ನು ನಿಂದಿಸಿದುದಕ್ಕಾಗಿ, ನಟಿ ಕಂಗನಾ ವಿರುದ್ಧ ಕಾಂಗ್ರೆಸ್ ನ ಅಶೋಕ್ ಜಗತಾಪ್ ಹಕ್ಕುಚ್ಯುತಿ ಮಂಡಿಸಿದರು. ಎರಡೂ ಹಕ್ಕುಚ್ಯುತಿಗಳು ಸ್ವೀಕರಿಸಲ್ಪಟ್ಟಿವೆ. ಇತ್ತೀಚೆಗೆ ನಡೆದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕಂಗನಾಗೆ ಕೇಂದ್ರದಿಂದ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಇದಕ್ಕೂ ಕೂಡಾ ಮುಂಬೈಗರಿಂದ ಹಾಗೂ ಬಾಲಿವುಡ್ ಮೂಲಗಳಿಂದ ಅಪಸ್ವರಗಳು ಎದ್ದಿದೆ

- Advertisement -