‘ಗ್ಯಾರಂಟಿ’ಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ?: ಸಿ.ಟಿ. ರವಿಗೆ ಸಿಎಂ ಪ್ರಶ್ನೆ

Prasthutha|

ಚಿಕ್ಕಮಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ಬಿಜೆಪಿ ನಿರಂತರವಾಗಿ ಅವಮಾನಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ವಿಪರೀತ ಸುಳ್ಳುಗಳನ್ನು ಹೇಳುತ್ತಿದೆ. ಸಿಟಿ ರವಿ ಗ್ಯಾರಂಟಿ ಫಲಾನುಭವಿಗಳನ್ನು ಅವಮಾನಿಸುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಇಲ್ಲವೇ ಸಿ.ಟಿ.ರವಿ ಎಂದು ಪ್ರಶ್ನಿಸಿದ್ದಾರೆ.

- Advertisement -

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ರಾಜ್ಯದ ಜನರು ಹಕ್ಕು. ಫಲಾನುಭವಿಗಳನ್ನು ಅವಮಾನಿಸುವುದನ್ನು ತಕ್ಷಣ ನಿಲ್ಲಿಸಿ ಎಂದು ಸಿಎಂ ಎಚ್ಚರಿಸಿದರು.

- Advertisement -

ಐದಕ್ಕೆ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಿದ ಜಿಲ್ಲೆಯ ಜನತೆಯ ಸಮಯಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ ಸಿದ್ದರಾಮಯ್ಯ, ನಿಮಗೆ ಬಿಜೆಪಿ ಸರ್ಕಾರದ ಅಚ್ಛೇ ದಿನಗಳು ಬಂದಿದೆಯಾ ಎಂದು ಜನರನ್ನು ಪ್ರಶ್ನಿಸಿದರು. ನೆರೆದಿದ್ದ ಜನರು ಇಲ್ಲ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಅಭಿವೃದ್ಧಿ ಶೂನ್ಯ ಬಿಜೆಪಿ, ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಸುಳ್ಳುಗಳ ಆಧಾರದಲ್ಲೇ ದೇಶವನ್ನು ಆಳುವ ಸರ್ಕಸ್ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್, ಹಸಿವು ಮುಕ್ತ ಭಾರತ ನಿರ್ಮಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನೀವು ಸ್ವತಂತ್ರ ಭಾರತದ ಇತಿಹಾಸ ನೋಡಿದರೆ ಹಸಿವು ಮುಕ್ತ ಭಾರತಕ್ಕಾಗಿ ಕಾಂಗ್ರೆಸ್ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿತು ಎನ್ನುವ ಪಟ್ಟಿಯೇ ಸಿಗುತ್ತದೆ ಎಂದು ಸಿಎಂ ಹೇಳಿದರು.

ಕುವೆಂಪು ಅವರ ಸರ್ವೋದಯವಾಗಲಿ ಸರ್ವರಲಿ ಎನ್ನುವ ಮೌಲ್ಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಸರ್ವರ ಉದಯಕ್ಕಾಗಿನೇ ಕಾಂಗ್ರೆಸ್ ಶ್ರಮಿಸುತ್ತಿದೆ. ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ನಾಲ್ಕೂವರೆ ಕೋಟಿ ಜನರ ಮನೆ ಬಾಗಿಲು ಬಡಿದಿದೆ ಎಂದು ಅಂಕಿ ಅಂಶಗಳ ಸಮೇತ ಮುಖ್ಯಮಂತ್ರಿ ವಿವರಿಸಿದರು.

ಬಿಜೆಪಿ ರಾಜ್ಯದ ಜನರ ಬದುಕನ್ನು ಪಕ್ಕಕ್ಕಿಟ್ಟು ಕೇವಲ ಭಾವನೆಗಳನ್ನು ಕೆರಳಿಸುತ್ತದೆ. ಇದುವರೆಗೂ ರಾಜ್ಯದಲ್ಲಿ ಬಿಜೆಪಿ ಒಂದು ಭಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರೇ ಹೊರತು ಸ್ವಂತ ಶಕ್ತಿ ಮೇಲೆ ಅಧಿಕಾರ ನಡೆಸಿಯೇ ಇಲ್ಲ. ನಾವು 2013 , 2023 ಎರಡೂ ಬಾರಿಯೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾ, ಅಲ್ವಾ ತಮ್ಮಯ್ಯ ಎಂದು ಚಿಕ್ಕಮಗಳೂರು ಶಾಸಕರನ್ನು ಪ್ರಶ್ನಿಸಿದರು.

4 ಕೋಟಿ 64 ಲಕ್ಷ ಜನರಿಗೆ ನಮ್ಮ ಗ್ಯಾರಂಟಿಗಳು ತಲುಪಿ ಅವರಿಗೆ ಸ್ವಲ್ಪ ಸಮಾಧಾನ ತಂದಿದೆ. ಅವರ ಜೇಬಿಗೆ ನೇರವಾಗಿ ನಾವು ಹಣ ಹಾಕುತ್ತಿರುವುದರಿಂದ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದರ ಪರಿಣಾಮ ರಾಜ್ಯದ ಆರ್ಥಿಕತೆಗೆ ಬಡವರು ಶಕ್ತಿ ತುಂಬಿದ್ದಾರೆ ಎಂದು ಸಿಎಂ ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಚಿಕ್ಕಮಗಳೂರು ಜಿಲ್ಲೆಯ ಜನರ ಖಾತೆಗೆ ಜಮೆ ಆದ ಹಣ ಎಷ್ಟು ಗೊತ್ತಾ ಎಂದು ಕೇಳಿದ ಸಿದ್ದರಾಮಯ್ಯ ಅಂಕಿ ಅಂಶ ಸಹಿತ ವಿವರಣೆ ನೀಡಿದರು.

ಶಕ್ತಿ ಯೋಜನೆಯಲ್ಲಿ ಇದುವರೆಗೂ ಒಟ್ಟು 1 ಕೋಟಿ 52 ಲಕ್ಷ ಹೆಣ್ಣು ಮಕ್ಕಳು ವಿಶೇಷ ಪ್ರಯೋಜನ ಪಡೆದಿದ್ದಾರೆ. ಈ ಬಾಬ್ತು ರೂ.55 ಕೋಟಿ 71 ಲಕ್ಷ ವೆಚ್ಚವಾಗಿರುತ್ತದೆ. ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಚಟುವಟಿಕೆಯೂ ಸಹ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದರು.

200 ಯೂನಿಟ್‍ ಗಿಂತ ಕಡಿಮೆ ಗೃಹ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ “ಗೃಹಜ್ಯೋತಿ” ಯೋಜನೆಯನ್ನು ಇದೇ ವರ್ಷದ ಜುಲೈ ತಿಂಗಳಿಂದ ಜಾರಿಗೆ ತರಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೆ 2 ಲಕ್ಷ 95 ಸಾವಿರ ಕುಟುಂಬಗಳು ನೋಂದಣಿಯಾಗಿದ್ದು, ಪ್ರತಿ ತಿಂಗಳಿಗೆ ಅಂದಾಜು ರೂ.10 ಕೋಟಿಗಳ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಈ ಯೋಜನೆಗೆ ಈವರೆಗೂ ರೂ.56 ಕೋಟಿ 60 ಲಕ್ಷ ಮೌಲ್ಯದ ವಿದ್ಯುತ್ ಒದಗಿಸಲಾಗಿದೆ ಎಂದರು.

ಮೂರನೆಯದಾಗಿ “ಅನ್ನಭಾಗ್ಯ ಯೋಜನೆ” ಅಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಲಕ್ಷ 41 ಸಾವಿರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳು ನೋಂದಣಿಯಾಗಿರುತ್ತವೆ. ಮಾಸಿಕವಾಗಿ ರೂ 12 ಲಕ್ಷ 98 ಕೋಟಿಗಳಂತೆ ಒಟ್ಟು 87 ಕೋಟಿ 43 ಲಕ್ಷಗಳು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಎಂದರು.

ನಾಲ್ಕನೆಯದಾಗಿ “ಗೃಹಲಕ್ಷ್ಮಿ ಯೋಜನೆ” ಅಡಿಯಲ್ಲಿ ಮನೆಯ ಯಜಮಾನಿಗೆ ರೂ. 2,000/- ನೀಡುವ ಗುರಿ ಹೊಂದಿದ್ದು, ಈವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಲಕ್ಷ 44 ಸಾವಿರ ಫಲಾನುಭವಿಗಳಿಗೆ ಒಟ್ಟು ರೂ. 49 ಕೋಟಿಗಳು ಸಂದಾಯವಾಗುತ್ತಿದೆ. ಯೋಜನೆ ಪ್ರಾರಂಭವಾದ ಆಗಸ್ಟ್-2023ರ ಮಾಹೆಯಿಂದ ಈವರೆಗೆ ರೂ. 289 ಕೋಟಿ 19 ಲಕ್ಷಗಳು ಫಲಾನುಭವಿಗಳಿಗೆ ಡಿ ಬಿ ಟಿ ಮೂಲಕ ಸಂದಾಯವಾಗಿದೆ ಎಂದು ವಿವರಿಸಿದರು.

ಐದನೆಯದಾಗಿ ಪ್ರಸ್ತುತ ವರ್ಷ, ಪದವಿ ಮತ್ತು ಡಿಪ್ಲೊಮಾ ತೇರ್ಗಡೆಯಾಗುವ ನಿರುದ್ಯೋಗಿ ಯುವಜನರಿಗೆ “ಯುವನಿಧಿ” ಯೋಜನೆ ಅಡಿಯಲ್ಲಿ ಇದುವರೆಗೆ 2657 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. 441 ಯುವ ಜನರಿಗೆ ತಲಾ 3 ಸಾವಿರ ರೂ.ಗಳಂತೆ ಒಟ್ಟು 13 ಲಕ್ಷದ 23 ಸಾವಿರ ಯುವನಿಧಿ ಭತ್ಯೆ ಮಂಜೂರಾಗಿರುತ್ತದೆ ಎಂದು ಸಿಎಂ ವಿವರಿಸಿದರು.

ಈ 5 ಯೋಜನೆಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ರೂ 486.86 ಕೋಟಿ ವೆಚ್ಚ ವಾಗಿರುತ್ತದೆ ಎಂದು ಅಂಕಿ ಅಂಶಗಳ ಸಮೇತ ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವೆ ಮೋಟಮ್ಮ, ಜಿಲ್ಲೆಯ ಶಾಸಕರುಗಳಾದ ನಯನ ಮೋಟಮ್ಮ, ಆನಂದ್ ಕುಮಾರ್, ರಾಜುಗೌಡ, ಶ್ರೀನಿವಾಸ್, ತಮಯ್ಯ ಗೌಡ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನಾಯಕರು ಉಪಸ್ಥಿತರಿದ್ದರು.

Join Whatsapp
Exit mobile version