ಬೆಂಗಳೂರು: ಪ್ರಧಾನಮಂತ್ರಿಗಳೆಂದರೆ ಅವರೇನು ಸರ್ವಾಧಿಕಾರಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಪ್ರಧಾನಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ ದುರಹಂಕಾರದಿಂದ ಮಾತನಾಡುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯಪ್ರದೇಶದ ಚುನಾವಣೆಯಲ್ಲಿ ನನ್ನ ಬಗ್ಗೆ ಪ್ರಧಾನಿ ಮಾತನಾಡಬಹುದೇ ಎಂದು ಬಿಎಸ್ ವೈಗೆ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಸರ್ಕಾರ ಕೇವಲ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ಮಗ್ನವಾಗಿದೆ ಎಂದಿರುವ ಬಗ್ಗೆ ಪತ್ರಕರ್ತರು ಕೇಳಿದಾಗ, ಕುಮಾರಸ್ವಾಮಿಯವರು ಯಾವಾಗ ಸತ್ಯವನ್ನು ಹೇಳಿದ್ದಾರೆ ಎಂದು ತಿರುಗಿ ಪ್ರಶ್ನಿಸಿದರು. ಸುಳ್ಳು ಆರೋಪಗಳನ್ನು ಮಾಡುವುದು, ಸುಳ್ಳು ಹೇಳುವುದನ್ನು ಬಿಟ್ಟರೆ ಅವರು ಬೇರೇನೂ ಮಾಡುತ್ತಿಲ್ಲ. ವಿರೋಧ ಪಕ್ಷ ಎಂದ ಮೇಲೆ ಸಲಹೆಗಳನ್ನೂ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಹಾಸನದ ಲೋಕಸಭಾ ಚುನಾವಣಾ ಅಭ್ಯರ್ಥಿ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ, ಹಾಸನ ಜಿಲ್ಲೆಗೆ ಸಚಿವರನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿನ ಜನನಾಯಕರ ಅಭಿಪ್ರಾಯಗಳ ವರದಿಯನ್ನು ಪಡೆದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯತ್ನಾಳ್ ಶೇಮ್ ಲೆಸ್ ವ್ಯಕ್ತಿ
ಶಾಸಕ ಬಸವರಾಜ ಯತ್ನಾಳ್ ಕಾಂಗ್ರೆಸ್ ಶೇಮ್‍ಲೆಸ್ ಸರ್ಕಾರ ಎಂದು ಹೇಳಿರುವ ಬಗ್ಗೆಯೂ ಸಿಎಂ ಮಾತನಾಡಿ, ಯತ್ನಾಳ್ ಅವರೇ ಶೇಮ್‍ಲೆಸ್ ವ್ಯಕ್ತಿ. ಅವರ ನಡವಳಿಕೆ ಸರಿಯಿಲ್ಲದ ಕಾರಣ ಬಿಜೆಪಿ ಅವರಿಗೆ ನೋಟೀಸು ಜಾರಿ ಮಾಡಿತ್ತು ಎಂದು ತಿರುಗೇಟು ನೀಡಿದರು.
ಬರ ನಿರ್ವಹಣೆ ಸಂಬಂಧವಾಗಿ ಮಾತನಾಡಿದ ಸಿಎಂ, ಇಂತಹ ಸಂದರ್ಭಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರ ಎಲ್ಲದ್ದಕ್ಕೂ ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡುತ್ತಿಲ್ಲ ಬದಲಿಗೆ ಪರಿಹಾರ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿ ಬರ ಬಂದರೆ ಕೇಂದ್ರ ಸರ್ಕಾರದ್ದು ಜವಾಬ್ದಾರಿ ಇರುತ್ತದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತೆರಿಗೆ ನೀಡುತ್ತದೆ. ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಅನುದಾನವಿರುತ್ತದೆ. ಬೆಳೆ ನಷ್ಟವಾದಾಗ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇರುತ್ತದೆ. 33700 ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, 17900 ಕೋಟಿ ರೂ.ಗಳನ್ನು ಪರಿಹಾರವಾಗಿ ಕೇಳಿದ್ದೇವೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಇಲ್ಲಿಗೆ ಭೇಟಿ ನೀಡಿ ಹೋಗಿದ್ದರೂ, ಇನ್ನೂ ವರದಿ ನೀಡಿಲ್ಲ. ಅನುದಾನ ಶೀಘ್ರ್ರವಾಗಿ ನೀಡಲು ಕೋರಿದ್ದೇವೆ ಎಂದರು. ನಾವು ಬರೆದಿರುವು ಪತ್ರಕ್ಕೆ ಇನ್ನೂ ಉತ್ತರ ಬಂದಿಲ್ಲ ಎಂದೂ ಸಿಎಂ ತಿಳಿಸಿದರು.
ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರ ಸಂಗಪ್ಪ 300 ಕೋಟಿ ಹಣ ಬಿಡುಗಡೆ ಮಾಡಲು 38 ಲಕ್ಷ ಲಂಚ ಕೇಳುತ್ತಿರುವ ಕುರಿತು ಮಾತನಾಡಿದ ಸಿದ್ದರಾಮಯ್ಯ, ಈ ಬಗ್ಗೆ ವಿಚಾರಣೆ ಮಾಡಲಾಗುವುದು. ತನಿಖೆ ನಡೆಸಿ, ಆರೋಪ ಸಾಬೀತಾದರೆ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಹಾಸನಾಂಬ ದೇಗುಲದಲ್ಲಿ ಕೆಲವು ಮೌಢ್ಯಾಚರಣೆಗಳು ಇದ್ದು, ಸಿಎಂ ಭೇಟಿ ಇದಕ್ಕೆ ಪುಷ್ಟಿ ನೀಡಿದಂತಾಗುವುದಿಲ್ಲವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಕೆಲವು ಮೌಢ್ಯಗಳನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನೂ ಜಾರಿ ಮಾಡಿದೆ. ನಾನು ಪ್ರಜ್ಞಾಪೂರ್ವಕವಾಗಿ ಯಾವುದೇ ಮೌಢ್ಯಗಳನ್ನು ಪಾಲಿಸುವುದಿಲ್ಲ. ಆದರೆ ದೇವರಲ್ಲಿ ನಂಬಿಕೆ ಇರಿಸಿದ್ದೇನೆ. ದೇಗುಲದ ಕೆಲವು ಆಚರಣೆಗಳನ್ನು ಹೆಚ್ಚಿನ ಜನರು ನಂಬುವುದನ್ನು ನಾವು ನೋಡುತ್ತಿದ್ದೇವೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆಯಾದರೂ ಬರಲಿ ಎಂದು ಹಾಸನಂಬೆಯಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜೋಳ, ರಾಗಿ, ಭತ್ತ ಪ್ರಮುಖ ಬೆಳೆಗಳು, ಮುಂಗಾರು ಮಳೆ ಬರದೇ ಬೆಳೆಗಳೂ ಕೈಗೆಟುಕುವುದಿಲ್ಲ. ಹಿಂಗಾರು ಬಂದರೆ, ದನಕರುಗಳಿಗೆ ಮೇವು ದೊರೆಯುತ್ತದೆ . ಇಂದು ಹಾಸನ ಜಿಲ್ಲೆಯ ಹಾಸನಾಂಬ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಜಿಲ್ಲೆಯ ಬರಗಾಲದ ಪರಿಸ್ಥಿತಿ ನಿರ್ವಹಣೆಯ ಬಗ್ಗೆಯೂ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ನಿವಾರಣೆ ಬಗ್ಗೆಯೂ ಸಿಎಂ ಮಾತನಾಡಿದರು. 800 ಮೆಗಾ ವ್ಯಾಟ್ ನಷ್ಟು ಥರ್ಮಲ್ ವಿದ್ಯುತ್ ನ್ನು ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ರಾಜ್ಯದ ಬಳಕೆಗೆ ಲಭ್ಯವಾಗಬೇಕು ಎಂಬ ಆದೇಶ ಹೊರಡಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಪ್ರಾರಂಭದಿಂದಾಗಿ ವಿದ್ಯುತ್ ಕೋಜನರೇಷನ್ ಸಾಧ್ಯವಾಗುತ್ತಿದ್ದು, ಸುಮಾರು 450 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಎಲ್ಲ ಕ್ರಮಗಳಿಂದ ಮೂರು ಫೇಸ್ ಗಳಲ್ಲಿ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ ಎಂದರು.
ಹಾಸನ ವೈದ್ಯಕೀಯ ಕಾಲೇಜಿನ ನಿರ್ದೇಶಕರ ರಾಜಿನಾಮೆಯಿಂದ ಖಾಲಿ ಹುದ್ದೆಗೆ ನೇಮಕಾತಿ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಯಾಕೆ ಕ್ರಮ ಕೈಗೊಂಡಿರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ಪರಿಶೀಲಿಸಿ ಕೂಡಲೇ ಬೇರೆಯವರನ್ನು ಹುದ್ದೆಗೆ ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗಿ ತೊಂದರೆಯಾಗಿರುವ ಬಗ್ಗೆಯೂ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸುತ್ತಾ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗಿಲ್ಲ ಎಂದು ಹೇಳಿದರು.