ಬಿಜೆಪಿಯು ಮೇಲ್ಜಾತಿ, ಸಿರಿವಂತರ ಪರವಾಗಿದ್ದು ಬಡವರ ವಿರೋಧಿಯಾಗಿದೆ. ಪಕ್ಷದ ಸಬ್ ಕಾ ಸಾಥ್‌ನಲ್ಲಿ ಮುಸ್ಲಿಂ, ಕ್ರೈಸ್ತರು, ದಲಿತರಿದ್ದಾರಾ? ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಸ್ತಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರವಧಿಯಲ್ಲಿ ಬಡವರಿಗಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ಈ ಸರ್ಕಾರ ತಡೆಹಿಡಿದಿದೆ. ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತರ ಏಳಿಗೆಯನ್ನು ಸಹಿಸದ ಪಕ್ಷ ಬಿಜೆಪಿಯಾಗಿದೆ ಎಂದು ದೂರಿದ್ದಾರೆ.
ದೇಶದ ಶೇ.65ರಷ್ಟು ಜನ ಗ್ರಾಮೀಣರನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ. ದೆಹಲಿಯಲ್ಲಿ ಲಕ್ಷಾಂತರ ಗ್ರಾಮೀಣ ರೈತರು ಧರಣಿ ನಡೆಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿದೆ. ಪ್ರಧಾನಿ ಮೋದಿ ಧರಣಿ ನಿರತರನ್ನು ಮಾತನಾಡಿಸಲಿಲ್ಲ. ರೈತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.