ರಿಯಾದ್: 2023ನೇ ಸಾಲಿನ ಪವಿತ್ರ ಹಜ್ ಯಾತ್ರೆಗೆ ಸೌದಿ ಅರೇಬಿಯಾವು ಭಾರತಕ್ಕೆ ಸುಮಾರು 1.75 ಲಕ್ಷ ಕೋಟಾವನ್ನು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಹಜ್ ಕಮಿಟಿಯು ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ.
ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ ಶೇ. 90 ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ.
ಫೆ.10 ಶುಕ್ರವಾರದಿಂದ ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಹಜ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು ಅರ್ಜಿದಾರರು ಹಜ್-2023ರ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಅರ್ಜಿಯು https://hajcommittee.gov.in/haf23/ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಆಕಾಂಕ್ಷಿಗಳು ಮಾರ್ಚ್ 10, 2023ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಭಾರತೀಯ ಹಜ್ ಸಮಿತಿ ತಿಳಿಸಿದೆ.