ಫುಟ್‌ಬಾಲ್‌ ಪಂದ್ಯದ ವೇಳೆ ತರಬೇತುದಾರರ ನಡುವೆ ತಳ್ಳಾಟ

Prasthutha|

ಸಭ್ಯತೆಯ ಆಟಕ್ಕೆ ಹೆಸರುವಾಸಿಯಾದ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಕೋಚ್‌ಗಳು ಪರಸ್ಪರ ವಾಕ್ಸಮರ-ತಳ್ಳಾಟದಲ್ಲಿ ಭಾಗಿಯಾದ ಅಪರೂಪದ ಘಟನೆ ನಡೆದಿದೆ.  

- Advertisement -

ಸ್ಟಾಮ್‌ಫೋರ್ಡ್‌ ಬ್ರಿಡ್ಜ್‌ ಮೈದಾನದಲ್ಲಿ ಭಾನುವಾರ ತಡರಾತ್ರಿ ನಡೆದ ಚೆಲ್ಸಿಯಾ ಮತ್ತು ಟೊಟೆನ್‌ಹ್ಯಾಮ್‌ ತಂಡಗಳ ನಡುವಿನ ಪಂದ್ಯದಲ್ಲಿ ಘಟನೆ ನಡೆದಿದೆ. ಮೊದಲಾರ್ಧದ 19ನೇ ನಿಮಿಷದಲ್ಲಿ ಕಾಲಿಡೌ ಕೌಲಿಬಾಲಿ ಚೆಲ್ಸಿಯಾ ಪರ ಗೋಲಿನ ಖಾತೆ ತೆರೆದಿದ್ದರು. 1-0 ಹಿನ್ನಡೆಯೊಂದಿಗೆ ದ್ವಿತಿಯಾರ್ಧದಲ್ಲಿ ಮೈದಾನಕ್ಕಿಳಿದ ಟೊಟೆನ್‌ಹ್ಯಾಮ್‌, 68ನೇ ನಿಮಿಷದಲ್ಲಿ ಪಿಯರೆ-ಎಮಿಲ್ ಹೊಜ್ಬ್ಜೆರ್ಗ್ ಮೂಲಕ ಸಮಬಲ ಸಾಧಿಸಿತ್ತು. 77ನೇ ನಿಮಿಷದಲ್ಲಿ ರೀಸೆ ಜೇಮ್ಸ್‌ ಗೋಲ್‌ ಮೂಲಕ ಚೆಲ್ಸಿಯಾ, ಪಂದ್ಯದ ಹೆಚ್ಚುವರಿ ಅವಧಿಯವರೆಗೂ ಮುನ್ನಡೆ ಸಾಧಿಸಿತ್ತು. ಆದರೆ ಅಂತಿಮ ನಿಮಿಷದಲ್ಲಿ ಹೆಡ್ಡರ್‌ ಮೂಲಕ ಚೆಂಡನ್ನು ಗೋಲು ಬಲೆಯೊಳಗೆ ತಳ್ಳಿದ ಹ್ಯಾರಿ ಕೇನ್‌ ಪಂದ್ಯವನ್ನು ರೋಚಕವಾಗಿ ಸಮಬಲದಲ್ಲಿ ಕೊನೆಗೊಳಿಸಿದರು.

ಪಂದ್ಯ ಮುಗಿದ ಬಳಿಕ ಚೆಲ್ಸಿಯಾ ತಂಡದ ಕೋಚ್‌ ಥಾಮಸ್‌ ಟಚೆಲ್‌ ಮತ್ತು ಟೊಟೆನ್‌ಹ್ಯಾಮ್‌ ತಂಡದ ಕೋಚ್‌ ಆಂಟೊನಿಯೋ ಕೋಂಟೆ ಹಸ್ತಲಾಘವಕ್ಕೆ ಮುಂದಾದ ವೇಳೆ ಮಾತಿನ ಚಕಮಕಿ ನಡೆಯಿತು.

- Advertisement -

ಮುಖ ನೋಡಲು ಕೋಂಟೆ ನಿರಾಕರಿಸಿದ್ದು ಥಾಮಸ್‌ ಟಚೆಲ್‌ ಅವರ ಕೋಪಕ್ಕೆ ಕಾರಣವಾಗಿತ್ತು. ಉಭಯ ತಂಡಗಳ ಆಟಗಾರರು, ಅಧಿಕಾರಿಗಳು ಮಧ್ಯ ಪ್ರವೇಶಿಸಿ ಇಬ್ಬರ ಜಗಳ ಬಿಡಿಸಿದ್ದಾರೆ. ಮೈದಾನದಲ್ಲಿ ತೋರಿದ ಕೆಟ್ಟ ವರ್ತನೆಗಾಗಿ ಇಬ್ಬರು ಕೋಚ್‌ಗಳಿಗೂ ಪಂದ್ಯದ ರೆಫ್ರಿ ಕೆಂಪು ಕಾರ್ಡ್‌ ನೀಡಿದರು. ಟೂರ್ನಿಯಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳನ್ನಾಡಿದ್ದು, ಟೊಟೆನ್‌ಹ್ಯಾಮ್‌ ನಾಲ್ಕನೇ ಸ್ಥಾನದಲ್ಲಿ ಮತ್ತು ಚೆಲ್ಸಿಯಾ ಏಳನೇ ಸ್ಥಾನದಲ್ಲಿದೆ.



Join Whatsapp