ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸುತ್ತಿದ್ದು, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಸೋಮವಾರ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಸೆಂಟ್ರಲ್ ಕೋಲ್ಕತ್ತದ ರಾಮಲೀಲಾ ಮೈದಾನದಲ್ಲಿ ಶಾಸಕ ನೌಶಾದ್ ಸಿದ್ದೀಕ್ ನಡೆಸುತ್ತಿದ್ದ ವಕ್ಫ್ ಕಾಯ್ದೆ ವಿರೋಧಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಬೆಂಬಲಿಗರು ತೆರಳುತ್ತಿದ್ದರು. ಅವರನ್ನು ಭೋಜೆರ್‌ಹಟ್‌ನ ಹೆದ್ದಾರಿಯಲ್ಲಿ ಭಾನ್‌ಗರ್ ಪೊಲೀಸರು ತಡೆದರು.
ಬ್ಯಾರಿಕೇಡ್ ಭೇದಿಸಿ ಮುನ್ನುಗ್ಗಿದ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದರು. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಇದರಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರ್‍ಯಾಲಿಯಲ್ಲಿ ಮಾತನಾಡಿದ ಐಎಸ್‌ಎಫ್ ಶಾಸಕ ನೌಶಾದ್ ಸಿದ್ದೀಕ್ ‘ವಕ್ಫ್ (ತಿದ್ದುಪಡಿ) ಕಾಯ್ದೆ ತರುವ ಮೂಲಕ ಬಿಜೆಪಿ ಕೋಮು ಗಲಭೆ ಸೃಷ್ಟಿಸುವ ಸಂಚು ರೂಪಿಸುತ್ತಿದೆ. ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎನ್ನುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ನಮ್ಮ ಹೋರಾಟ ತಡೆಯುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.