ದೆಹಲಿಯ ಜಂತರ್ ಮಂತರ್ ನಲ್ಲಿ ಮುಸ್ಲಿಮ್ ವಿರೋಧಿ ಘೋಷಣೆಗಳ ವಿರುದ್ಧ ಎಫ್ ಐಆರ್ ದಾಖಲು

Prasthutha|

ನವದೆಹಲಿ: ದೆಹಲಿಯ ಹೃದಯ ಭಾಗದಲ್ಲಿರುವ ಜಂತರ್ ಮಂತರ್ ನಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಮುಸ್ಲಿಮ್ ವಿರೋಧಿ ಘೋಷಣೆ ಕೂಗುತ್ತಿರುವ ವೀಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪರಿಚಿತರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

- Advertisement -

ಈ ಮೆರವಣಿಗೆಯನ್ನು ಸುಪ್ರೀಂ ಕೋರ್ಟ್ ವಕೀಲ ಮತ್ತು ದೆಹಲಿ ಬಿಜೆಪಿ ಮಾಜಿ ವಕ್ತಾರ ಅಶ್ವನಿ ಉಪಾಧ್ಯಾಯ ಆಯೋಜಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅನುಮತಿ ಇಲ್ಲದೆಯೇ ನಡೆಸಿರುವ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆಯೆಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲದೆ ಅವರು ಅಂತಹ ದ್ವೇಷಪೂರಿತವಾದ ಘೋಷಣೆಯನ್ನು ಸಾರ್ವಜನಿಕವಾಗಿ ಎತ್ತಬಾರದಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧವಾಗಿ “ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ” (ಭಾರತದಲ್ಲಿ ಉಳಿಯಲು, ಜೈ ಶ್ರೀ ರಾಮ್ ಎಂದು ಹೇಳಬೇಕು) ಮತ್ತು ಜೈ ಶ್ರೀರಾಮ್ ಘೋಷಣೆಗಳು ಕಾರ್ಯಕ್ರಮದ ಉದ್ದಕ್ಕೂ ಕೂಗುತ್ತಿರುವುದು ಆ ವೀಡಿಯೋದ ಮೂಲಕ ಸ್ಪಷ್ಟವಾಗುತ್ತದೆ. ದ್ವೇಷದ ಭಾಷಣಗಳಿಗೆ ಕುಖ್ಯಾತಿ ಪಡೆದ ಪಾದ್ರಿ ನರಸಿಂಗಾನಂದ ಸರಸ್ವತಿಯವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದರ ವಿರುದ್ಧ ದೆಹಲಿ ಪೊಲೀಸ್ ಇಲಾಖೆ ವೀಡಿಯೋದಲ್ಲಿರುವವರನ್ನು ಗುರುತಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಯಾದವ್ ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಪಾರ್ಲಿಮೆಂಟ್ ನಲ್ಲಿ ಪ್ರಸ್ತಾಪಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಯವರು ಪ್ರಧಾನಿ ನಿವಾಸದಿಂದ 20 ನಿಮಿಷಗಳ ದೂರದಲ್ಲಿರುವ ಜಂತರ್ ಮಂತರ್ ನಲ್ಲಿ ನರಮೇದದ ಘೋಷಣೆಗಳನ್ನು ಕೂಗಿರುವ ದುಷ್ಕರ್ಮಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲವೆಂದು ಪ್ರಧಾನಿಮಂತ್ರಿಯನ್ನು ಪ್ರಶ್ನಿಸಿದರು. ಮಾತ್ರವಲ್ಲದೆ ಹಜ್ ಭವನದ ವಿರುದ್ಧ ದೆಹಲಿಯ ದ್ವಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನಾತ್ಮಕ ಭಾಷಣ ಮತ್ತು ಹಿಂಸೆಯ ಬೆದರಿಕೆ ಹಾಕಿದವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಉವೈಸಿ ಒತ್ತಾಯಿಸಿದರು.



Join Whatsapp