ಕೊಯಮತ್ತೂರು: ಇಸ್ಲಾಮ್ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಡಿಸೆಂಬರ್ ನಲ್ಲಿ ಬಂಧಿತನಾಗಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಈ ಹಿಂದೆ ಮುಸ್ಲಿಮ್ ಆಗಿದ್ದು ಬಳಿಕ ನಾಸ್ತಿಕ ವಲಯಗಳಲ್ಲಿ ಗುರುತಿಸಿಕೊಂಡಿದ್ದ ಬಿ.ಕೆ. ಪುದೂರು ನಿವಾಸಿ ಎಂ ಅನೀಶ್ (30) ಎಂಬಾತನಿಗೆ ಜಾಮೀನು ದೊರೆತಿದೆ.
ಈತನ ವಿರುದ್ಧ ಸಬ್ ಇನ್ಸ್ ಪೆಕ್ಟರ್ ವಿ ಗಣೇಶ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕುಣಿಯಮುತ್ತೂರು ಪೊಲೀಸರು ಡಿಸೆಂಬರ್ 29 ರಂದು ಪ್ರಕರಣ ದಾಖಲಿಸಿದ್ದರು.
ಸೆಕ್ಷನ್ 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕೆಡಿಸಲು ಪೂರ್ವಗ್ರಹ ಪೀಡಿತ ಕೃತ್ಯ ವೆಸಗುವುದು), 295 (ಎ) (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅನೀಶ್ ಇಸ್ಲಾಂನ ತತ್ವಗಳನ್ನು ಪ್ರಶ್ನಿಸುವ ಮೀಮ್ಸ್ ಗಳನ್ನು ಪೋಸ್ಟ್ ಮಾಡಿದ್ದ. ಮಾತ್ರವಲ್ಲ ಪ್ರವಾದಿ ಮುಹಮ್ಮದ್ ಅವರನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಟೀಕಿಸಿದ್ದ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿತ್ತು.
ಆರೋಪಿಯ ವಿರುದ್ಧ ಹೊರಿಸಲಾಗಿರುವ ಆರೋಪಗಳು ಇನ್ನೂ ಖಚಿತವಾಗಿಲ್ಲ ಎಂದು ನ್ಯಾಯಾಧೀಶ ಆರ್ ಶಕ್ತಿವೇಲ್ ಹೇಳಿದರು.