Home ರಾಜ್ಯ ಬಿಎಡ್ ಮೂರನೇ ಸೆಮಿಸ್ಟರ್ ನಲ್ಲಿ ಇಸ್ಲಾಮ್ ವಿರೋಧಿ ಪಠ್ಯ ಪುಸ್ತಕ: ಬಿಜೆಪಿ ಸರಕಾರದ ದ್ವೇಷ ಹರಡುವ...

ಬಿಎಡ್ ಮೂರನೇ ಸೆಮಿಸ್ಟರ್ ನಲ್ಲಿ ಇಸ್ಲಾಮ್ ವಿರೋಧಿ ಪಠ್ಯ ಪುಸ್ತಕ: ಬಿಜೆಪಿ ಸರಕಾರದ ದ್ವೇಷ ಹರಡುವ ಷಡ್ಯಂತ್ರಕ್ಕೆ ಪಾಪ್ಯುಲರ್ ಫ್ರಂಟ್ ಆಕ್ರೋಶ

ಬೆಂಗಳೂರು: ಬಿಎಡ್ ಮೂರನೇ ಸೆಮಿಸ್ಟರ್ ನಲ್ಲಿ ಇಸ್ಲಾಮ್ ವಿರೋಧಿ ಪಠ್ಯಪುಸ್ತಕವನ್ನು ಸೇರಿಸುವ ಮೂಲಕ ಬಿಜೆಪಿ ಸರಕಾರವು ವಿದ್ಯಾರ್ಥಿಗಳ ಮನಸ್ಸಿನಲ್ಲೂ ದ್ವೇಷ ಹರಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಸ್ಮಯ ಪ್ರಕಾಶನ ಹೊರ ತಂದಿರುವ ಬಿ.ಆರ್.ರಾಮ ಚಂದ್ರಯ್ಯರ ‘ಮೌಲ್ಯ ದರ್ಶನ – ದಿ ಎಸೆನ್ಸ್ ಆಫ್ ವ್ಯಾಲ್ಯೂ ಎಜುಕೇಷನ್’ ಎಂಬ ಕೃತಿಯು ಇಸ್ಲಾಮ್ ವಿರೋಧಿ ಅಂಶಗಳನ್ನು ಹೊಂದಿರುವುದು ಬಹಳ ಸ್ಪಷ್ಟವಾಗಿದೆ. ಇಸ್ಲಾಮ್, ಕುರ್ ಆನ್ ನಿನ ಚಿಂತನೆ ಮತ್ತು ಪ್ರವಾದಿಯವರ ಬಗ್ಗೆ ಲೇಖನದ ವಿಚಾರಗಳು ಅತ್ಯಂತ ಪೂರ್ವಗ್ರಹಪೀಡಿತವಾಗಿದೆ ಮತ್ತು ಎಲ್ಲಾ ರೀತಿಯಿಂದಲೂ ತಪ್ಪು ದಾರಿಗೆ ಎಳೆಯುವಂಥದ್ದಾಗಿವೆ. ಹಿಂದುತ್ವವನ್ನು ಪ್ರಚುರಪಡಿಸುವ ಮತ್ತು ಇಸ್ಲಾಮಿನ ವಿರುದ್ಧ ಅಪಪ್ರಚಾರ ನಡೆಸುವ ಮೂಲಕ ಶಿಕ್ಷಣದ ಕೇಸರೀಕರಣಕ್ಕೆ ನಿರಂತರ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಇದೀಗ ಬಿಜೆಪಿ ಸರಕಾರವು ಇಸ್ಲಾಮೋಫೋಬಿಯಾವನ್ನು ಹರಡುವ ನಿಟ್ಟಿನಲ್ಲಿ ವಿವಾದಾಸ್ಪದವಾಗಿರುವ ಕೃತಿಯೊಂದನ್ನು ಪಠ್ಯಪುಸ್ತಕವನ್ನಾಗಿ ಆಯ್ಕೆ ಮಾಡಿರುವುದು ಅಕ್ಷಮ್ಯ. ಈ ಕೃತಿಯು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕೆನ್ನುವ ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಈ ಕೃತಿಯನ್ನು ಪಠ್ಯಪುಸ್ತಕದಿಂದ ಕೂಡಲೇ ಹಿಂಪಡೆಯಬೇಕು. ಇಸ್ಲಾಮಿನ ವಿರುದ್ಧ ಪೂರ್ವಗ್ರಹಪೀಡಿತವಾಗಿ ಬರೆದಿರುವ ಮತ್ತು ಸುಳ್ಳು ಮಾಹಿತಿಯನ್ನು ನೀಡುವ ಈ ಕೃತಿಯನ್ನು ಕೂಡಲೇ ತಡೆಹಿಡಿಯಬೇಕು. ಉದ್ದೇಶಪೂರ್ವಕವಾಗಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಲೇಖಕ ಮತ್ತು ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಸರಕಾರವು ಎಲ್ಲಾ ಧರ್ಮೀಯರ ಭಾವನೆಗಳನ್ನು ಗೌರವಿಸಬೇಕು ಮತ್ತು ಇಂತಹ ವಿವಾದಾಸ್ಪದ ಕೃತಿಗಳನ್ನು ಪಠ್ಯಪುಸ್ತಕಕ್ಕೆ ಆಯ್ಕೆ ಮಾಡುವುದರ ಬಗ್ಗೆ ಎಚ್ಚರವಹಿಸಬೇಕೆಂದು ಅಶ್ರಫ್ ಜೋಕಟ್ಟೆ ಆಗ್ರಹಿಸಿದ್ದಾರೆ.

Join Whatsapp
Exit mobile version