ಲಕ್ನೋ: 2019 ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ಪ್ರತಿಭಟನಕಾರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಸರ್ಕಾರವು ಪ್ರತಿಭಟನಾಕಾರರ ಆಸ್ತಿ ಜಪ್ತಿ ಮಾಡಲು ಯತ್ನಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಜಪ್ತಿ ಪ್ರಕ್ರಿಯೆಯನ್ನು ಹಿಂಪಡೆಯಲು ರಾಜ್ಯಕ್ಕೆ ಫೆಬ್ರವರಿ 18 ರವರೆಗೆ ಗಡುವು ನೀಡಿದೆ. ಕಾನೂನಿನ ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಕಾನೂನನ್ನು ಉಲ್ಲಂಘಿಸಿದ್ದಲ್ಲಿಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳ ಹಾನಿಯಿಂದ ಉಂಟಾದ ನಷ್ಟವನ್ನು ವಸೂಲಿ ಮಾಡಲು ಜಿಲ್ಲಾಡಳಿತವು ಪ್ರತಿಭಟನಾಕಾರರಿಗೆ ಕಳುಹಿಸಿರುವ ನೋಟಿಸ್ ರದ್ದುಗೊಳಿಸುವಂತೆ ಕೋರಿ ಪರ್ವೈಜ್ ಆರಿಫ್ ಟಿಟು ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಸರ್ವಾಧಿಕಾರಿಗಳಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ. 833 ಹೋರಾಟಗಾರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 274 ವಸೂಲಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಗರಿಮಾ ಪ್ರಸಾದ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
“274 ನೋಟಿಸ್‌ಗಳಲ್ಲಿ 236 ನೋಟಿಸ್‌ಗಳು ವಸೂಲಾತಿ ಆದೇಶಗಳನ್ನು ಹೊಂದಿದ್ದು,38 ಪ್ರಕರಣಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ” ಎಂದು ಯುಪಿ ಸರ್ಕಾರದ ವಕೀಲರು ತಿಳಿಸಿದ್ದಾರೆ.