ಸ್ಯಾನ್ ಫ್ರಾನ್ಸಿಸ್ಕೋ: ಗರ್ಭಪಾತದ ಹಕ್ಕುಗಳ ವಿಚಾರವಾಗಿ ಅಮೆರಿಕದಲ್ಲಿ ಉಂಟಾಗಿರುವ ವಿವಾದದ ಮಧ್ಯೆ ಗರ್ಭಪಾತಿ ವಿರೋಧಿ ಹೊರಾಟಗಾರನೊಬ್ಬ ವಿಚಿತ್ರವಾಗಿ ಪ್ರತಿಭಟಿಸಿದ್ದಾನೆ.
ಲಾಸ್ ವೇಗಸ್ ನ ನೆವಡ ವಿವಿ ವಿದ್ಯಾರ್ಥಿಯಾಗಿರುವ 22 ಪ್ರಾಯದ ಮೈಸನ್ ಡೆಸ್ಚಾಂಪ್ಸ್ ಎಂಬಾತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸುಮಾರು 1070 ಅಡಿ ಎತ್ತರದ 61 ಮಹಡಿಯ ಸೇಲ್ಸ್ ಫೋರ್ಸ್ ಕಟ್ಟಡವನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆಯದೇ ಹತ್ತಿ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾನೆ.
ಮಂಗಳವಾರ ಬೆಳಗ್ಗೆ ಸುಮಾರು 9:21 ಗಂಟೆಗೆ ಈತ ಗಗನಚುಂಬಿ ಕಟ್ಟಡವನ್ನು ಏರುತ್ತಿರುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಎಚ್ಚರಿಕೆ ನೀಡಿದರೂ ಮೈಸನ್ ಡೆಸ್ಚಾಂಪ್ಸ್ ಕ್ಯಾರೇ ಮಾಡಿರಲಿಲ್ಲ. ಬಳಿಕ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು, ಕಟ್ಟಡದ ತುತ್ತತುದಿಗೆ ಹೋಗಿ ತಲುಪುವಷ್ಟರಲ್ಲಿ ಮೈಸನ್ ಡೆಸ್ಚಾಂಪ್ಸ್ ಬಂಧಿಸಿದ್ದಾರೆ.
ಡೆಸ್‌ಚಾಂಪ್ಸ್ ಒಬ್ಬ ಅನುಭವಿ ಕ್ಲೈಂಬರ್ ಆಗಿದ್ದು, ವೈದ್ಯರನ್ನು ಕಂಬಿಗಳ ಹಿಂದೆ ತರುವ ಉದ್ದೇಶದಿಂದ ಆತ ಗೋಪುರವನ್ನು ಏರಲು ಬಯಸಿದ್ದರು ಎಂದು ಆತನ ವೆಬ್ ಸೈಟ್ ಬಹಿರಂಗಪಡಿಸುತ್ತದೆ.
‘ನಾನೊಬ್ಬ ಕ್ಲೈಂಬರ್ ಆಗಿದ್ದು, ಗರ್ಭಪಾತವನ್ನು ಕೊನೆಗೊಳಿಸಲು ಇತ್ತೀಚೆಗೆ ಗಗನಚುಂಬಿ ಕಟ್ಟಡಗಳನ್ನು ಏರಲು ಪ್ರಾರಂಭಿಸಿದ್ದೇನೆ,’ ಎಂದು ಆತ ತನ್ನ ವೆಬ್ ಸೈಟ್ www.prolifespiderman.com ನಲ್ಲಿ ತಿಳಿಸಿದ್ದಾನೆ.