Home ಟಾಪ್ ಸುದ್ದಿಗಳು ಪ್ರಬುದ್ಧ ಮತ್ತು ಯುವ ಪ್ರಜ್ಞಾವಂತ ಮತದಾರರಿಂದ ಮೋದಿ ಸರ್ಕಾರಕ್ಕೆ ಪ್ರತ್ಯುತ್ತರ : ರಕ್ಷಾ ರಾಮಯ್ಯ

ಪ್ರಬುದ್ಧ ಮತ್ತು ಯುವ ಪ್ರಜ್ಞಾವಂತ ಮತದಾರರಿಂದ ಮೋದಿ ಸರ್ಕಾರಕ್ಕೆ ಪ್ರತ್ಯುತ್ತರ : ರಕ್ಷಾ ರಾಮಯ್ಯ

►ಪೆಹಲಾ ಓಟ್ ಅಭಿಯಾನ: ಯುವ ಸಮೂಹದೊಂದಿಗೆ ಸಂವಾದ

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದ್ದು, ಪರಿವರ್ತನೆಗೆ ಯುವ ಸಮೂಹ ಮುನ್ನುಡಿ ಬರೆಯಬೇಕು ಎಂದು ಏಐಸಿಸಿ ಸದಸ್ಯ ಹಾಗೂ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್‌ ನಿಂದ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಪೆಹಲಾ ಓಟ್‌ ಮತ್ತು ಯುವ ಮತ ಅಭಿಯಾನ ಹಾಗೂ ಯುವ ಸಮೂಹದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನ ಬದಲಾವಣೆ ಬಯಸಿದ್ದು, ಕರ್ನಾಟಕದಿಂದಲೇ ಇದು ಆರಂಭವಾಗಿದೆ. ಕೇಂದ್ರದಿಂದ ಯಾವುದೇ ಜ್ವಲಂತ ಸಮಸ್ಯೆಗಳ ನಿವಾರಣೆ ಸಾಧ್ಯವಿಲ್ಲ ಎಂಬುದನ್ನು ಯುವ ಜನಾಂಗ ಅರಿತುಕೊಂಡಿದೆ. ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಲ್ಲಿ ಬದಲಾವಣೆಯ ಚಿಂತನೆ ಆರಂಭವಾಗಿದ್ದು, ಇವರೆಲ್ಲರೂ ಪ್ರಬುದ್ಧ ಮತ್ತು ಪ್ರಜ್ಞಾವಂತ ಮತದಾರರು ಎಂದರು.

ಕೇಂದ್ರ ಸರ್ಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ವಾಮಮಾರ್ಗದಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಮುಖ್ಯಸ್ಥರನ್ನು ನೇಮಿಸುವ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಕೈಬಿಡುವ ಹುನ್ನಾರ ನಡೆಯುತ್ತಿದೆ. ಈ ಕುರಿತ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ಸುಪ್ರೀಂ ಕೋರ್ಟ್ ಆಶಯಗಳನ್ನು ಮೋದಿ ಸರ್ಕಾರ ಗಾಳಿಗೆ ತೂರಿದೆ. ಜಾರಿ ನಿರ್ದೇಶನಾಲಯದ ವಿಷಯದಲ್ಲೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಎಲ್ಲಾ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರೂ ಸಹ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಪೆಹಲಾ ಓಟ್ ಅತ್ಯಂತ ಮಹತ್ವದ ಅಭಿಯಾನವಾಗಿದ್ದು, ದೇಶಾದ್ಯಂತ ಆರಂಭಗೊಂಡಿದೆ. ರಾಜ್ಯದಲ್ಲಿ ತಮಗೆ ಈ ಅಭಿಯಾನದ ಉಸ್ತುವಾರಿ ನೀಡಿದ್ದು, 18 ರಿಂದ 23 ವರ್ಷ ವಯೋಮಿತಿಯ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದೇವೆ. ಎಲ್ಲಾ ಕಾಲೇಜುಗಳು, ಮಾಲ್ ಗಳು, ಮಾರುಕಟ್ಟೆಗಳು, ಜನನಿಭಿಡ ಪ್ರದೇಶಗಳಲ್ಲೂ ಅಭಿಯಾನ ತೀವ್ರಗೊಳ್ಳಲಿದೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದರು.

ಬೆಲೆ ಏರಿಕೆ ಕುರಿತು ಕರ್ನಾಟಕದಲ್ಲಿ ಚುನಾವಣೆ ಸೋತ ನಂತರ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾಗುತ್ತಿದೆ. ಇಷ್ಟು ದಿನ ತೀವ್ರ ಸಂಕಷ್ಟದಲ್ಲಿ ತೊಡಗಿದ್ದ ಜನರ ನೆರವಿಗೆ ಧಾವಿಸಲಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರ ಸಾಮಗ್ರಿಗಳ ದರ ಇಳಿಕೆ ಮಾಡಲಿಲ್ಲ. ಕರ್ನಾಟಕದ ಗ್ಯಾರೆಂಟಿ ಯೋಜನೆಗಳ ಜಾರಿ ನಂತರ ಇದೀಗ ಬೆಲೆ ಇಳಿಕೆ ಮಾಡಲು ಮುಂದಾಗಿದೆ. ಇಷ್ಟು ದಿನ ಜನರ ಕಷ್ಟ ನೋಡಿಕೊಂಡು ಮೂಕ ಪ್ರೇಕ್ಷಕರಾಗಿದ್ದ ಮೋದಿ ಸರ್ಕಾರ ಇದೀಗ ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲು ಆರಂಭಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ವಿಧಾನಪರಿಷತ್‌ ಸದಸ್ಯರಾದ ಅನಿಲ್‌ ಕುಮಾರ್‌ ಮತ್ತಿತತರ ಗಣ್ಯರು ಪಾಲ್ಗೊಂಡರು.

Join Whatsapp
Exit mobile version