ಬೆಂಗಳೂರು: ರಾಜ್ಯದಲ್ಲೇ ಗದಗ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಂದಿದೆ. ಆದರೆ ಶೇಕಡಾ 60ರಷ್ಟು ರೈತರಿಗೆ ಇನ್ನೂ ನೈಯಾ ಪೈಸೆ ವಿಮೆ ಹಣ ಬಂದಿಲ್ಲ ಎಂಬುವುದು ಬೆಳಕಿಗೆ ಬಂದಿದ್ದು ಬೆಳೆ ವಿಮೆಯಲ್ಲಿ ರಾಜ್ಯದಲ್ಲಿ ಮತ್ತೊಂದು ಗೋಲ್ಮಾಲ್ ಶುರುವಾಗಿಯೇ ಎಂಬ ಅನುಮಾನ ಶುರುವಾಗಿದೆ.
ಗದಗ ಜಿಲ್ಲೆಗೆ ಬರೊಬ್ಬರಿ 82.82 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಂದಿದೆ. ವಿಪರ್ಯಾಸ ಅಂದ್ರೆ ಶೇಕಡಾ 60 ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲಾ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ನಿತ್ಯವೂ ರೈತರು ಬೆಳೆ ವಿಮೆ ಹಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲೇರುವಂತೆ ಮಾಡಿದೆ.
ರೈತರು ಒಂದು ಹೆಕ್ಟೇರ್ ಪ್ರದೇಶಕ್ಕೆ 15 ರಿಂದ 20 ಸಾವಿರ ರೂಪಾಯಿ ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಕಳೆದ ವರ್ಷ ಅತಿಯಾದ ಮಳೆಯಿಂದ ಬೆಳೆಯನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಆದರೆ ಬೆಳೆ ವಿಮೆ ಮಾತ್ರ ಬಂದಿಲ್ಲ. 82 .82 ಕೋಟಿ ರೂಪಾಯಿ ಜಿಲ್ಲೆಗೆ ಹರಿದು ಬಂದಿದ್ದರೂ 60 ಶೇಕಡಾ ರೈತರಿಗೆ ಬೆಳೆ ವಿಮೆ ದೊರಕದದ್ದು ರಾಜ್ಯ ಸರಕಾರದಲ್ಲಿ ಮತ್ತೊಂದು ಭ್ರಷ್ಟಾಚಾರ ತಲೆ ಎತ್ತಿದೆಯೇ ಎಂಬ ಸಂಶಯ ಕಾಡತೊಡಗಿದೆ.