ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ: ಸಿಲಿಂಡರ್ ಸ್ಫೋಟಕ್ಕೆ ಮೂವರು ಬಲಿ

Prasthutha|

ಬೆಂಗಳೂರು: ದೇವರಚಿಕ್ಕನಹಳ್ಳಿಯ ಆಶ್ರಿತ್ ಶೆಲ್ಟರ್ಸ್ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ದುರಂತದ ಬೆನ್ನಲ್ಲೇ ಚಾಮರಾಜಪೇಟೆಯ ನಗರ್ತಪೇಟೆಯ ಗೋದಾಮಿನಲ್ಲಿ ಇಂದು ಮಧ್ಯಾಹ್ನ ಸಿಲಿಂಡರ್ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿ ಮೂವರು ದೇಹಗಳು ಛಿದ್ರಗೊಂಡು ಸಾವನ್ನಪ್ಪಿದ್ದಾರೆ.

- Advertisement -

ದುರಂತದಲ್ಲಿ ಐವರು ಗಾಯಗೊಂಡಿದ್ದು  ಅವರನ್ನು ಸ್ಥಳೀಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡವರಲ್ಲಿ  ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

- Advertisement -

ದುರ್ಘಟನೆಯಲ್ಲಿ ಪಂಕ್ಚರ್ ಶಾಪ್ ಮಾಲೀಕ ಅಸ್ಲಮ್ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಫೋಟಗೊಂಡ ವೇಳೆ ಅಲ್ಲಿನ ಸಿಬ್ಬಂದಿಯ ಸಹಾಯಕ್ಕೆ ಬಂದ ಜನ, ಪೊಲೀಸರು ಬರುವಷ್ಟರಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.

ಸುತ್ತಮುತ್ತಲಿನ 100 ಮೀಟರ್ ದೂರದವರೆಗೆ ಸ್ಫೋಟ ಶಬ್ದ ಕೇಳಿ  ಭಯದಿಂದ ಸ್ಥಳೀಯರು ಮನೆಯಿಂದ ಹೊರಬಂದು ನೋಡಿದ್ದಾರೆ. ಭೂಕಂಪನದ ರೀತಿಯಲ್ಲಿ ಜನರಿಗೆ ಅನುಭವವಾಗಿದೆ. ಸ್ಫೋಟದ ತೀವ್ರತೆಗೆ 3 ಮೀಟರ್ ದೂರಕ್ಕೆ ಹಾರಿ ಮೂವರ ದೇಹಗಳು ಗೋದಾಮಿನಿಂದ ಹೊರಗೆ ಬಿದ್ದಿವೆ.

ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಕರಕಲಾಗಿವೆ. ಅಕ್ಕಪಕ್ಕದ ಮನೆಗಳಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಪುಡಿಪುಡಿಯಾಗಿವೆ. ಸ್ಫೋಟದಿಂದ ಚಿಲ್ಲರೆ ಅಂಗಡಿ ಸಂಪೂರ್ಣ ಜಖಂ ಆಗಿದೆ. ಟೀ ಕುಡಿಯಲು ಬಂದಿದ್ದ ವ್ಯಕ್ತಿಯ ದೇಹವೂ ಛಿದ್ರ ಛಿದ್ರವಾಗಿದೆ.

ರಾಯನ್ ವೃತ್ತದಲ್ಲಿ ಮಧ್ಯಾಹ್ನ 12.10ರ ಸುಮಾರಿಗೆ  ದಿಢೀರ್ ಸ್ಫೋಟ ಸಂಭವಿಸಿ ಭಾರೀ  ಶಬ್ದ ಕೇಳಿಬಂತು  ನಾನು ಸ್ಥಳಕ್ಕೆ ಹೋದಾಗ ದಟ್ಟವಾದ ಹೊಗೆ ಆವರಿಸಿತ್ತು. ಪಂಕ್ಚರ್ ಅಂಗಡಿಯಲ್ಲಿದ್ದ ಕಂಪ್ರೆಸರ್ ಸ್ಫೋಟದ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ  ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಗೋಡೌನ್ ತುಂಬಾ ಹೆಚ್ಚು ಪಟಾಕಿ ಇರುವ ಹಿನ್ನೆಲೆಯಲ್ಲಿ ಮತ್ತೆ ಸ್ಫೋಟವಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಫೈರ್ ಇಂಜಿನ್ ಮೂಲಕ ನೀರು ಹಾಕಿ ಬೆಂಕಿ ಹತೋಟಿಗೆ ತರಲಾಗಿದೆ.

ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಆದರೂ ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಗೋದಾಮಿನಲ್ಲಿ ಒಟ್ಟು 8 ಮಂದಿ ಕೆಲಸ ಮಾಡುತ್ತಿದ್ದು, ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರ ಛಿದ್ರವಾಗಿವೆ. ಈ ಮೂವರು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕವರಾಗಿದ್ದು, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು.

ಘಟನೆಯ ಸಂಬಂಧ 3 ಆಯಾಮದಲ್ಲಿ ತನಿಖೆ ನಡೆಲಾಗುತ್ತಿದೆ ಎಂದು ಪಾಂಡೆ ತಿಳಿಸಿದರು.

Join Whatsapp