ಚಿಕ್ಕಮಗಳೂರು: ಹೇಮಾವತಿ ನದಿಗೆ ಭಾರಿ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಮತ್ತೊಂದು ಕಾರು ನದಿಗೆ ಹಾರಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಘಟನೆ ನಡೆದಿದೆ.
ನಿನ್ನೆ ಶುಕ್ರವಾರ ಕೂಡ ಇದೇ ಜಾಗದಲ್ಲಿ, ಇದೇ ಶೈಲಿಯಲ್ಲಿ ಕಾರು ಬಿದ್ದಿತ್ತು.
ಇಂದಿನ ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿಯಿಂದ ಮೂಡಿಗೆರೆಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿದ ಕಾರು ನದಿಗೆ ಬಿದ್ದಿದೆ.
ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಸಹಾಯದಿಂದ ಕಾರನ್ನು ಮೇಲೆ ಎತ್ತಲಾಗಿದೆ.
ನಿನ್ನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನೋಡ ನೋಡುತ್ತಿದ್ದಂತೆ ಕಾರು ಹೇಮಾವತಿ ನದಿಗೆ ಹಾರಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಾರು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯಿಂದ ಜಿಗಿದು ನದಿಗೆ ಕಾರು ಬಿದ್ದಿತ್ತು.
ಕಳೆದ ಎರಡು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಈ ಸ್ಥಳದಲ್ಲೇ ಮತ್ತೆರಡು ಅಪಘಾತ ಸಂಭವಿಸಿದೆ.
ಕರಾವಳಿಯಲ್ಲಿ ವಿಪರೀತ ಮಳೆ ಸೂಚನೆ:
ಜೂನ್ 30ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.