ಬೆಂಗಳೂರು: ಒಂದೇ ದಿನ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆ ನೀಡದಿದ್ದರೆ, ಅವರ ಮನೆಗೆ ನೂರಾರು ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕುವುದಾಗಿ ಮೋಹನ್ ದಾಸರಿ ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “ಕೆಲವು ದಿನಗಳ ಹಿಂದೆಯಷ್ಟೇ ಕೇವಲ 24 ಗಂಟೆಗಳ ಅಂತರಲ್ಲಿ ಮೂವರು ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ದುರ್ಘಟನೆಗೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿ ನಾಯಕರು ನೌಕರರ ಪರವಾಗಿ ದನಿ ಎತ್ತಿದ್ದರು. ಈ ಕಾರಣಕ್ಕೆ ಸುಮಾರು 18 ಎಎಪಿ ನಾಯಕರು ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನೌಕರರ ಪರ ದನಿ ಎತ್ತುವರರನ್ನು ಹತ್ತಿಕ್ಕಲು ಸಚಿವ ಶ್ರೀರಾಮುಲು ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಯವರು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದರು.
“ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಚಿವ ಶ್ರೀರಾಮುಲು ಸಂಪೂರ್ಣ ವಿಫಲರಾಗಿದ್ದಾರೆ. ಅವರಿಗೆ ಹಣ ಮಾಡುವುದು ಮುಖ್ಯವಾಗಿದೆಯೇ ಹೊರತು ಸಾರಿಗೆ ವ್ಯವಸ್ಥೆಯ ಅಭಿವೃದ್ಧಿ ಹಾಗೂ ನೌಕರರ ಹಿತ ಬೇಕಾಗಿಲ್ಲ. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿಯವರು ಹಾಗೂ ಕೆಲವು ಉನ್ನತ ಅಧಿಕಾರಿಗಳಿಂದಾಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಸಹಕರಿಸದ ಪ್ರಾಮಾಣಿಕ ನೌಕರರು ನಿರಂತರವಾಗಿ ಕಿರುಕುಳ ಅನುಭವಿಸಬೇಕಾಗಿದೆ. ಶ್ರೀರಾಮುಲುರವರು ಸಚಿವ ಸ್ಥಾನಕ್ಕೆ ಶೀಘ್ರವೇ ರಾಜೀನಾಮೆ ನೀಡುವ ಮೂಲಕ ಸಾರಿಗೆ ಸಂಸ್ಥೆಯ ಘನತೆ ಉಳಿಸಬೇಕು. ಇಲ್ಲದಿದ್ದರೆ ಮಂಗಳವಾರದಂದು ಶ್ರೀರಾಮುಲು ನಿವಾಸದೆದುರು ಆಮ್ ಆದ್ಮಿ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಗುವುದು” ಎಂದು ಮೋಹನ್ ದಾಸರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು ಹಾಗೂ ಸುರೇಶ್ ರಾಥೋಡ್ ಭಾಗವಹಿಸಿದ್ದರು.