ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಸಂಭವಿಸಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ.
ಇತ್ತೀಚೆಗಷ್ಟೇ ಇದೇ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಯಿ-ಮಗ ಮೃತಪಟ್ಟಿದ್ದರು.
ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಮೃತ ಯುವತಿ. ಹಾಸನದ ದಾಸನಕೊಪ್ಪಲುವಿನ ಬೈಕ್ ಸವಾರ ಲಕ್ಷ್ಮೀನಾರಾಯಣ ಗೌಡ ಪರಿಸ್ಥಿತಿ ಗಂಭೀರವಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಬೈಕ್ ನಿಯಂತ್ರಣ ತಪ್ಪಿದೆ. ಅಪಘಾತದ ರಭಸಕ್ಕೆ ಸವಾರನ ಕುತ್ತಿಗೆ ಸೀಳಿ, ಎಡಗೈ ತುಂಡಾಗಿದೆ. ಇವರಿಬ್ಬರು ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಸಹೋದ್ಯೋಗಿಗಳಾಗಿದ್ದು, ಬೈಕ್ನಲ್ಲಿ ಮೈಸೂರು ಪ್ರವಾಸಕ್ಕೆಂದು ಹೋಗಿದ್ದರು. ವಾಪಸ್ ಬೆಂಗಳೂರಿಗೆ ಬರುವಾಗ ಅಪಘಾರ ಸಂಭವಿಸಿದೆ.
ಲಕ್ಷ್ಮೀನಾರಾಯಣ ಗೌಡಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಕೋಮಾ ಸ್ಥಿತಿಯಲ್ಲಿರುವ ಬೈಕ್ ಸವಾರ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಯುವತಿಯ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮದ್ದೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.