Home ಜಾಲತಾಣದಿಂದ ಬೆಂಗಳೂರಿನ SDPI ಅಭ್ಯರ್ಥಿಗಳಿಗೆ ಕ್ರೈಸ್ತ ಸಮುದಾಯದ ಬೆಂಬಲ ಘೋಷಿಸಿದ ಬಿಷಪ್ ಡಾ. ಕೃಪಾಕರನ್ ಪೌಲ್

ಬೆಂಗಳೂರಿನ SDPI ಅಭ್ಯರ್ಥಿಗಳಿಗೆ ಕ್ರೈಸ್ತ ಸಮುದಾಯದ ಬೆಂಬಲ ಘೋಷಿಸಿದ ಬಿಷಪ್ ಡಾ. ಕೃಪಾಕರನ್ ಪೌಲ್

ಬೆಂಗಳೂರು : ಎಸ್ಡಿಪಿಐ ಪಕ್ಷ ಸ್ಪರ್ಧಿಸುತ್ತಿರುವ ಬೆಂಗಳೂರಿನ ಎರಡು ಕ್ಷೇತ್ರಗಳಾದ ಪುಲಿಕೇಶಿನಗರ ಮತ್ತು ಸರ್ವಜ್ಞನಗರದ SDPI ಅಭ್ಯರ್ಥಿಗಳಿಗೆ ಕ್ರೈಸ್ತ ಸಮುದಾಯದ ಬೆಂಬಲ ನೀಡುವುದಾಗಿ ಬಿಷಪ್ ಡಾ. ಕೃಪಾಕರನ್ ಪೌಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಈ ಎರಡು ಕ್ಷೇತ್ರಗಳಲ್ಲಿ ಕ್ರೈಸ್ತರಿಗೆ ಸಮುದಾಯ ಭವನಗಳಿಲ್ಲ, ಸ್ಮಶಾನಕ್ಕೆ ಜಾಗವಿಲ್ಲ, ಅಲ್ಪಸಂಖ್ಯಾತ ವಿಭಾಗದಲ್ಲಿ ಬರುವ ಯಾವುದೇ ಸೌಲಭ್ಯಗಳು ಕೂಡ ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಎಸ್ಡಿಪಿಐ ಅಭ್ಯರ್ಥಿಗಳು ಗೆಲ್ಲುವ ಮೂಲಕ ಕ್ರೈಸ್ತ ಸಮುದಾಯಕ್ಕೆ ಸೌಲಭ್ಯಗಳು ಸಿಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ದೇಶದಲ್ಲಿ ಕ್ರೈಸ್ತ ಸಮುದಾಯದ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಕ್ರೈಸ್ತರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿಗಳು ನಡೆಯುತ್ತಿವೆ. ಚರ್ಚುಗಳಲ್ಲಿ ಪ್ರಾರ್ಥನೆ ಮಾಡುವವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಪ್ರಾರ್ಥನೆಯಲ್ಲಿ ತೊಡಗಿರುವ ಮಹಿಳೆಯರ ಕೈ ಹಿಡಿದು ಎಳೆಯುವಂತಹ ದೌರ್ಜನ್ಯಗಳು ಕೂಡ ನಿರಂತರವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಹಿತಾಸಕ್ತಿ ಕಾಪಾಡಬಲ್ಲ ಪಕ್ಷವನ್ನು ಬೆಂಬಲಿಸಬೇಕಾದದ್ದು ನಮ್ಮ ಕರ್ತವ್ಯ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ಸಂದರ್ಭದಲ್ಲಿ ಕ್ರೈಸ್ತರ ಪರ ನಿಂತ ಪ್ರಮುಖ ಪಕ್ಷ ಎಸ್ಡಿಪಿಐ ಪಕ್ಷ, ಕ್ರೈಸ್ತ ಸಮುದಾಯದ ಪರ ನಾವಿದ್ದೇವೆ ಎಂಬ ವಿಶ್ವಾಸವನ್ನು ಮೂಡಿಸಿತು. ಆ ಕಾರಣಕ್ಕಾಗಿ ಬೆಂಗಳೂರು ನಗರದಲ್ಲಿ ಸ್ಪರ್ಧಿಸುತ್ತಿರುವ SDPI ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಬಿಷಪ್ ಡಾ. ಕೃಪಾಕರನ್ ಪೌಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪುಲಿಕೇಶಿ ನಗರ ಕ್ಷೇತ್ರದ SDPI ಅಭ್ಯರ್ಥಿ ಬಿ. ಆರ್. ಭಾಸ್ಕರ್ ಪ್ರಸಾದ್ ಮತ್ತು ಸರ್ವಜ್ಞನಗರದ ಎಸ್ಡಿಪಿಐ ಅಭ್ಯರ್ಥಿ ಅಬ್ದುಲ್ ಹನ್ನಾನ್ ಅವರು ತಮಗೆ ಬೆಂಬಲ ವ್ಯಕ್ತಪಡಿಸಿದ ಬಿಷಪ್ ಡಾ. ಕೃಪಾಕರನ್ ಪೌಲ್ ಅವರಿಗೆ ಧನ್ಯವಾದ ಸಲ್ಲಿಸಿದರು. ಎಸ್ಡಿಪಿಐ ಪಕ್ಷ ಕ್ರೈಸ್ತರ ಪರ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಬಿ. ಆರ್. ಭಾಸ್ಕರ್ ಪ್ರಸಾದ್, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 60 – 70 ವರ್ಷಗಳು ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಇನ್ನೂ ಶಾಲೆ ನಿರ್ಮಾಣ, ಆಸ್ಪತ್ರೆ ನಿರ್ಮಾಣ ಮಾಡಿಕೊಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳನ್ನು ಕೊಡುತ್ತಿದೆ. ಅದರ ಅರ್ಥ ಇಷ್ಟು ವರ್ಷ ಅವರು ಅದನ್ನು ಮಾಡಿಲ್ಲ ಎಂದೇ ಆಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಹಿತ ಕಾಯುವ ಉದ್ದೇಶ ಇದ್ದಿದ್ದರೆ ಅವರು ತಮ್ಮ ಪ್ರಣಾಳಿಕೆಯಲ್ಲಿ ಹಿಜಾಬ್, ಅಜಾನ್ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ಬೆಂಗಳೂರಿನ SDPI ಚುನಾವಣಾ ಉಸ್ತುವಾರಿ ಮುಜಾಹೀದ್ ಪಾಷಾ, ಪಕ್ಷದ ಮುಖಂಡರಾದ ಮುಜಮ್ಮಿಲ್ ಮತ್ತು ಶಕೀಲ್ ಅವರು ಉಪಸ್ಥಿತರಿದ್ದರು.

Join Whatsapp
Exit mobile version