ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಈಗಿನ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಹೊಸ ಪಕ್ಷವನ್ನು ರಚಿಸಿ ತೆಲಂಗಾಣದಲ್ಲಿ ಸಕ್ರಿಯರಾಗಲು ಶರ್ಮಿಳಾ ತೀರ್ಮಾನಿಸಿದ್ದಾರೆ.
ರಾಜಶೇಖರ ರೆಡ್ಡಿ ಅವರ ಹುಟ್ಟುಹಬ್ಬದ ದಿನವಾದ ಜುಲೈ 8 ರಂದು ಹೊಸ ಪಕ್ಷವನ್ನು ಅನಾವರಣಗೊಳಿಸುವುದಾಗಿ ಶರ್ಮಿಳಾ ತಿಳಿಸಿದ್ದಾರೆ. ಜನರ ಸೇವೆ ಮಾಡಲು ಶರ್ಮಿಳಾ ಅವರು ನಿರ್ಧರಿಸಿರುವುದು ನನಗೆ ಅಪಾರ ಸಂತೋಷವನ್ನುಂಟು ಮಾಡಿದೆ, ತಂದೆಯ ಧೈರ್ಯ ತನ್ನ ಮಗಳಿಗೆ ಇದೆ ಎಂದು ತಾಯಿ ವೈ.ಎಸ್. ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.
ಜುಲೈ 8 ರಂದು ಹೊಸ ಪಕ್ಷದ ಹೆಸರು, ಲೋಗೊ ಮತ್ತು ಧ್ವಜವನ್ನು ಅನಾವರಣಗೊಳಿಸಲಾಗುವುದು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಶರ್ಮಿಳಾ ಹೇಳಿದ್ದಾರೆ. ಆದರೆ, ಜಗನ್ಮೋಹನ್ ರೆಡ್ಡಿ ತನ್ನ ಸಹೋದರಿಯ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.