ಚೆನ್ನೈ: ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ತಮಿಳುನಾಡು ಸರ್ಕಾರ ಚೆನ್ನೈನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಎರಡು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದೆ. ಬರಾಜ್ಯದಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ದಂಧೆ ಜೊತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸಂಬಂಧ ಕಲ್ಪಿಸಿ ಭಾಷಣ ಮಾಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಮಾದಕ ದ್ರವ್ಯ ದಂಧೆಕೋರರಿಗೆ ನೆರವು ನೀಡುವ ಮೂಲಕ ಮುಖ್ಯಮಂತ್ರಿ ದಂಧೆಯಲ್ಲಿ ಶಾಮಿಲಾಗಿದ್ದಾರೆ ಎಂದು ಅಣ್ಣಾಮಲೈ ಮತ್ತು ಪಳನಿಸ್ವಾಮಿ ಇಬ್ಬರೂ ಆರೋಪಿಸಿದ್ದರು.
ರಾಜಕೀಯ ಲಾಭ ಪಡೆಯುವ ದುರುದ್ದೇಶ ಮತ್ತು ಮುಖ್ಯಮಂತ್ರಿಯವರ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ಹೇಳಿಕೆಗಳನ್ನು ನೀಡಲಾಗಿದೆ ಎಂದು ಸರಕಾರ ಹೇಳಿದೆ.
ಮಾದಕ ವ್ಯಸನ ಮುಕ್ತ ರಾಜ್ಯ ಮಾಡಲು ಮುಖ್ಯಮಂತ್ರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ರಾಜ್ಯದ ಮಾದಕ ದ್ರವ್ಯ ವಿತರಣೆ ಜೊತೆ ಸಿಎಂಗೆ ಸಂಬಂಧ ಕಲ್ಪಿಸಲಾಗಿದೆ ಎಂದು ಸರಕಾರ ದೂರಿನಲ್ಲಿ ತಿಳಿಸಿದೆ.