Home ಟಾಪ್ ಸುದ್ದಿಗಳು ಮೊಟ್ಟೆ ವಿರೋಧಿಸಿದ ಮಠಾಧೀಶರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿನಿ ಅಂಜಲಿಗೆ ಸನ್ಮಾನ

ಮೊಟ್ಟೆ ವಿರೋಧಿಸಿದ ಮಠಾಧೀಶರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿನಿ ಅಂಜಲಿಗೆ ಸನ್ಮಾನ

ಗಂಗಾವತಿ: ಬಿಸಿಯೂಟ ಯೋಜನೆಯಡಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೋಳಿ ಮೊಟ್ಟೆ ವಿತರಿಸುವ ಸರಕಾರದ ನಿರ್ಧಾರವನ್ನು ತಡೆಯಲು ಮುಂದಾದ ಕೆಲವು ಮಠಾಧೀಶರು ಹಾಗೂ ಪಟ್ಟಭದ್ರ ಶಕ್ತಿಗಳ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿತ್ತು.

ಈ ಸಂದರ್ಭ ಗಂಗಾವತಿಯ ಎಂಟನೇ ತರಗತಿ ವಿದ್ಯಾರ್ಥಿನಿ ಅಂಜಲಿ ಪ್ರತಿಭಟನೆಯ ಸಂದರ್ಭ ಸರಕಾರಿ ಶಾಲೆಗಳಲ್ಲಿ ಕಲಿಯುವ ಪೌಷ್ಟಿಕಾಂಶ ಕೊರತೆ ಎದುರಿಸುವ ಬಡ ವಿದ್ಯಾರ್ಥಿಗಳ ಸ್ಥಿತಿಗತಿ, ಮೊಟ್ಟೆ ವಿತರಣೆ ವಿರೋಧಿ ಮಠಾಧೀಶರುಗಳ ವಿರುದ್ಧ ಆಡಿದ ಆಕ್ರೋಶ ಭರಿತ ಮಾತುಗಳು ದೇಶಾದ್ಯಂತ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡ್ ಆಗಿತ್ತು. ಮೊಟ್ಟೆ ವಿತರಣೆ ಪರವಾಗಿ ಜನಾಭಿಪ್ರಾಯ ರೂಪಣೆಯ ಹೋರಾಟಕ್ಕೆ ಬಲತುಂಬಿತ್ತು.

 ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಎಂ ರಾಜ್ಯ ಸಮ್ಮೇಳನದ ಸಭಾಂಗಣಕ್ಕೆ ವಿದ್ಯಾರ್ಥಿನಿ ಅಂಜಲಿ ಇಂದು ಕುಟುಂಬ ಸಮೇತವಾಗಿ ಆಗಮಿಸಿದ್ದರು. ಆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಗಳು ಜಿಲ್ಲೆಯ ಪ್ರಜ್ಞಾವಂತ ಜನತೆಯ   ಪರವಾಗಿ ಶಿವರಾಮ ಹಾರಂತರ ಚೋಮನ ದುಡಿ ಹಾಗೂ ಭಗತ್ ಸಿಂಗ್ ಜೀವನ ಚರಿತ್ರೆಯ ಪುಸ್ತಕ ನೀಡಿ ಗೌರವಿಸಲಾಯಿತು.

 ಈ ಸಂದರ್ಭ ಸಿಪಿಎಂ ದ ಕ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೃಷ್ಣಪ್ಪ ಕೊಂಚಾಡಿ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಸುಕುಮಾರ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version