Home ಟಾಪ್ ಸುದ್ದಿಗಳು ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಬಂಧನ

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ರನ್ನು ಜಾರಿ ನಿರ್ದೇಶನಾಲಯ ಸೋಮವಾರ ಮಧ್ಯರಾತ್ರಿ ಮುಂಬೈನಲ್ಲಿ ಬಂಧಿಸಿದೆ. ಸತತ 12ಗಂಟೆಗಳ ವಿಚಾರಣೆಯ ಬಳಿಕ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ 71 ವರ್ಷದ ದೇಶ್ ಮುಖ್ ರನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕಾರಿಗಳ ಪ್ರಶ್ನೆಗೆ ಮಾಜಿ ಗೃಹ ಸಚಿವ ದೇಶ್ ಮುಖ್ ನೇರವಾಗಿ ಉತ್ತರಿಸಲು ಹಿಂದೇಟು ಹಾಕಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದು, ಇಂದು ಕೋರ್ಟ್ ಗೆ ಹಾಜರು ಪಡಿಸಲಿದ್ದೇವೆ ಎಂದಿದ್ದಾರೆ. ಐದು ಬಾರಿ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ ಗೈರು ಹಾಜರಾಗಿದ್ದ ಅನಿಲ್ ದೇಶ್ ಮುಖ್ ಸೋಮವಾರ ಹಾಜರಾದರು. ಈ ವೇಳೆ ಅಧಿಕಾರಿಗಳ ಪ್ರಶ್ನೆಗೆ ನುಣಿಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕಮಿಷನರ್ ಪರಮ್ಬೀರ್ ಸಿಂಗ್ ಅವರು ದೇಶ್ ಮುಖ್ ಅವರ ಮೇಲೆ 100 ಕೋಟಿ ರೂಪಾಯಿಯ ಲಂಚ ವಸೂಲಿಯ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆಯ ಕ್ರಿಮಿನಲ್ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಗೆ ತೆರಳುವ ಮುನ್ನ ದೇಶ್ ಮುಖ್ ವೀಡಿಯೋ ಮೂಲಕ ಸಂದೇಶ ಬಿಡುಗಡೆ ಮಾಡಿದ್ದು ‘ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಅಧಿಕಾರಿಗಳ ವರದಿಗಳಿಗೆ ಆಧಾರವಿಲ್ಲ. ಹಿಂದೆಯೂ ಸಿಬಿಐ ಅಧಿಕಾರಿಗಳ ಎದುರು ಎರಡು ಬಾರಿ ಹಾಜರಾಗಿದ್ದೇನೆ ಎಂದಿದ್ದಾರೆ. ಪ್ರಸ್ತುತ ನನ್ನ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೆ ಅದಕ್ಕೆ ಇನ್ನಷ್ಟು ಸಮಯ ತಗಲುವ ಕಾರಣ ಈಗ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆರಳುತ್ತಿದ್ದೇನೆ’ ಎಂದಿದ್ದಾರೆ.

Join Whatsapp
Exit mobile version