ಮಹಿಳಾ ಪರ ಬಜೆಟ್ ಎಂದು ಹೇಳಿ ಸರಕಾರ ಮಹಿಳೆಯರಿಗೆ ಮೋಸ ಮಾಡಿದೆ: ಜಯಮ್ಮ

Prasthutha|

►ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸದ ಬಜೆಟ್ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: ಮಹಿಳಾ ಪರ ಬಜೆಟ್ ಎಂದು ಹೇಳಿ ಸರಕಾರ ಮಹಿಳೆಯರಿಗೆ ಮೋಸ ಮಾಡಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಹೇಳಿದ್ದಾರೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಇನ್ನು ಮುಂದೆ ಯಾವುದೇ ಸಮೀಕ್ಷೆಗೆ ನಾವು ಮುಂದಾಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

ಬೆಂಗಳೂರು ಚಲೋ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ನೀಡಿದ ಭರವಸೆ ಮತ್ತು ಬಳಿಕ ನಡೆದ ಸಭೆಯಲ್ಲೂ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಘೋಷಣೆಯಾದ ರಾಜ್ಯ ಬಜೆಟ್ -2021ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ)ಯು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದೆ.‌

ಜಯಮ್ಮ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇಲಾಖೆಯು ಸರಕಾರಕ್ಕೆ ಶಿಫಾರಸ್ಸು ಮಾಡಿದ ಕೆಲವು ಬೇಡಿಕೆಗಳನ್ನೂ ಸರಕಾರ ಬಜೆಟ್ ನಲ್ಲಿ ಸೇರಿಸದೆ ಮಹಿಳಾ ದಿನಾಚರಣೆಯಂದೇ ಮಹಿಳಾ ಪರ ಬಜೆಟ್ ಎಂದು ಹೇಳಿ ಫೋಟೋಗಳಿಗೆ ಫೋಸ್ ಕೊಟ್ಟಿತ್ತು. ನಮ್ಮಂತಹ ಮಹಿಳೆಯರಿಗೆ ಬಜೆಟ್ ನಲ್ಲಿ ಒಂದು ಬಿಡಿಗಾಸನ್ನು ಕೊಡದೆ ಮಹಿಳೆಯರಿಗೆ ಮಹಾದ್ರೋಹ ಮಾಡಿದೆ. ಇದು ಮಹಿಳಾ ವಿರೋಧಿ ಬಜೆಟ್ ಎಂದು ಅವರು ಹೇಳಿದ್ದಾರೆ.

ಮನೆ ಮೇಲೆ ಸಮೀಕ್ಷೆ, ಬಿಪಿಎಲ್ ಸಮೀಕ್ಷೆ, ಬಿಎಲ್ಓ, ಕರೋನ ವ್ಯಾಕ್ಸಿನ್ ಸಮೀಕ್ಷೆ ಮಾಡಲು ನಮನ್ನು ಬಳಸಲಾಗುತ್ತದೆ. ಆದರೆ ನಮ್ಮ ಬೇಡಿಕೆಗಳಿಗೆ ಕಿಂಚಿತ್ತೂ ಈ ಸರಕಾರ ಗೌರವ ಕಲ್ಪಿಸುತ್ತಿಲ್ಲ. ಇದು ಬದುಕಿಸುವ ಸರಕಾರವಲ್ಲ.‌ ಜನರನ್ನು ಕೊಲ್ಲುವ ಸರಕಾರವಾಗಿದೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಸರಕಾರ ಮೂಗಿಗೆ ತುಪ್ಪವನ್ನು ಸವರುವ ಕೆಲಸ ಮಾಡ್ತಿದೆ. ಕಮಿಷನ್ ಆಧಾರದಲ್ಲಿ ಬಜೆಟ್ ಘೋಷಣೆ ಮಾಡಲಾಗಿದೆ. ಕಮಿಷನ್ ಯಾರು ಕೊಡ್ತಾರೋ ಅವರನ್ನು ಬಜೆಟ್ ನೊಳಗೆ ಸೇರಿಸಲಾಗಿದೆ. ಬಿಸಿಲಲ್ಲಿದ್ದು ಕಷ್ಟಪಡುವ ಜನರಿಗೆ ಈ ಬಜೆಟ್ ಬರೀ ಮೋಸ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಪ್ರತಿಭಟನೆಯಲ್ಲಿ ವೈ.ಡಿ.ಗಿರಿಜಾ, ಜಿ.ವಿ. ಧನಲಕ್ಷ್ಮಮ್ಮ, ಎನ್.ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

- Advertisement -