ಅಮರಾವತಿ: ಆಂಧ್ರಪ್ರದೇಶದ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ವೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಗುಡ್ಲವಲ್ಲೇರು ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ಹಾಸ್ಟೆಲ್ನಲ್ಲಿ ಹಾಕಲಾಗಿದ್ದ ಕ್ಯಾಮೆರಾ ವಿದ್ಯಾರ್ಥಿಯೊಬ್ಬನಿಗೆ ಸಿಕ್ಕಿದ್ದು, ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಕ್ಯಾಮರಾದಲ್ಲಿ ದಾಖಲಾಗಿರುವ ಕೆಲವು ವಿಡಿಯೋಗಳು ಬಾಲಕರ ಹಾಸ್ಟೆಲ್ನಲ್ಲಿ ಹರಿದಾಡಿವೆ ಎನ್ನಲಾಗಿದೆ. ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಕಾಲೇಜಿನಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಹಿಡನ್ ಕ್ಯಾಮೆರಾ ಇಟ್ಟವರು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಕರಣ ಸಂಬಂಧ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತನಿಖೆಗೆ ಆದೇಶಿಸಿದ್ದಾರೆ.
ಹಾಸ್ಟೆಲ್ನ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾಗಳು ಅಳವಡಿಸಿರುವ ಬಗ್ಗೆ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಘಟನೆ ಸಂಬಂಧ ಈಗಾಗಲೇ ಸಿಎಂ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ ಎಂದು ಸಚಿವ ಕೊಳ್ಳು ರವೀಂದ್ರ ತಿಳಿಸಿದ್ದಾರೆ.