ಮಂಗಳೂರು : ನಗರದ ನವಭಾರತ್ ಸರ್ಕಲ್ (ರಾಷ್ಟ್ರಕವಿ ಗೋವಿಂದ್ ಪೈ ವೃತ್ತ) ಅನ್ನು ಶುಕ್ರವಾರ (ಜೂನ್ 11 ರ) ರಾತ್ರಿ ನೆಲಸಮ ಮಾಡಲಾಗಿತ್ತು. ಆದರೆ ಇದೀಗ ಕಾಮಗಾರಿ ವೇಳೆ ವೃತ್ತದಲ್ಲಿ ಪುರಾತನ ಬಾವಿಯೊಂದು ಪತ್ತೆಯಾಗಿದ್ದು ಬಾವಿಯನ್ನು ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಇದು ಸರಿಸುಮಾರು 40 ವರ್ಷದ ಹಳೆಯ ಬಾವಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಕಾಮಗಾರಿಯ ಸಂದರ್ಭ ಮಣ್ಣು ಕುಸಿದು ಬಾವಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಶಕಗಳ ಹಿಂದೆ ಮಂಗಳೂರಿನ ಪ್ರಮುಖ ಪತ್ರಿಕೆಯಾಗಿದ್ದ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಈ ವೃತ್ತವೂ ಕಳಪೆ ನಿರ್ವಹಣೆಯಿಂದಾಗಿ, ತನ್ನ ಹಿಂದಿನ ಸೌಂದರ್ಯವನ್ನು ಕಳೆದುಕೊಂಡಿದ್ದು ಇತ್ತೀಚೆಗೆ ಹೆಚ್ಚಾಗಿ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಜಾಹೀರಾತುಗಳನ್ನು ಅಂಟಿಸಲು ಮಾತ್ರ ಬಳಸಲಾಗುತ್ತಿತ್ತು
“ಸ್ಮಾರ್ಟ್ ಸಿಟಿ ಕಾಮಗಾರಿಯ ಹಿನ್ನಲೆಯಲ್ಲಿ ನವಭಾರತ್ ಸರ್ಕಲ್ ಕೆಡವಲಾಗಿದ್ದು ಈ ವೃತ್ತ ಅವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟಿದ್ದು, ಸಂಚಾರ ಸುಗಮವಾಗಿ ಸಾಗಲು ಅನಾನುಕೂಲತೆಯನ್ನು ಉಂಟುಮಾಡುತ್ತಿದೆ. ಆದ್ದರಿಂದ ವೃತ್ತವನ್ನು ನೆಲಸಮ ಮಾಡಲಾಗಿದೆ. ಶೀಘ್ರದಲ್ಲೇ ಇಲ್ಲಿ ವೈಜ್ಞಾನಿಕ ವಲಯವನ್ನು ನಿರ್ಮಿಸಲಾಗುವುದು. ವೃತ್ತದ ಹೆಸರಿನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ” ಎಂದು ಮೇಯರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.
ಈ ಹಿಂದೆ ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ಹಂಪನೆಕಟ್ಟೆಯಲ್ಲಿಯೂ ನೂರಾರು ವರ್ಷ ಹಳೆಯದಾದ ಬಾವಿ ಪತ್ತೆಯಾಗಿತ್ತು. ಈ ಹಿಂದೆ ಈ ಬಾವಿಯೂ ‘ಅಪ್ಪಣ್ಣನ ಬಾವಿ’ ಎಂದೇ ಪ್ರಸಿದ್ಧಿ ಪಡೆದಿತ್ತು . ಅಪ್ಪಣ್ಣ ಅವರ ಹೆಸರೇ ಮುಂದೆ ಹಂಪನಕಟ್ಟೆಯಾಗಿತ್ತು.