ಕಾರವಾರ: ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಿದ್ದಕ್ಕೆ ಸಂಸದ ಅನಂತಕುಮಾರ್ ಹೆಗಡೆ ಕಾರಣ. ನಾನು ಸೋತಿದ್ದೇನೆ ಅಂದರೇ ಅದಕ್ಕೆ ಅನಂತಕುಮಾರ್ ಗೈರು ಕಾರಣ ಎಂದು ಬಿಜೆಪಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಸ್ವಪಕ್ಷದ ಸಂಸದರ ವಿರುದ್ಧವೇ ಅಸನಮಾಧಾನ ಹೊರಹಾಕಿದ್ದಾರೆ.
ಕಾರವಾರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಬಳಿ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ. ಈಗಲಾದರೂ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.
ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯನ್ನ ಗೆಲ್ಲಿಸಬೇಕು. ಅನಂತಕುಮಾರ್ ಹೆಗಡೆ ಸಕ್ರಿಯ ಆಗದಿದ್ದಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಆದರೆ ಈಗ ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಯಾವತ್ತೂ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ. ಅನಂತಕುಮಾರ್ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದಕ್ಕೆ ಖುಷಿ ಆಗಿದೆ ಎಂದು ಹೇಳಿದರು.