Home ಟಾಪ್ ಸುದ್ದಿಗಳು ಅನಂತ್ ಕುಮಾರ್ ತನ್ನ ಆರೋಗ್ಯವನ್ನು ನಿರ್ನಾಮ ಮಾಡದಿರಲಿ: ಕೆ.ಅಶ್ರಫ್

ಅನಂತ್ ಕುಮಾರ್ ತನ್ನ ಆರೋಗ್ಯವನ್ನು ನಿರ್ನಾಮ ಮಾಡದಿರಲಿ: ಕೆ.ಅಶ್ರಫ್

ಮಂಗಳೂರು: ನೈಜ ಸಮಸ್ಯೆಯಿಂದ ಜನರ ಗಮನವನ್ನು ವಿಕೇಂದ್ರೀಕರಿಸಿ ತಮ್ಮ ವೈಫಲ್ಯವನ್ನು ಮರೆ ಮಾಚಲು ಪ್ರಯತ್ನಿಸುವ ಸಂಘ ಮಿತ್ರ ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗ್ಡೆ ಈ ಬಾರಿ ಭಟ್ಕಳ ಗೋಲ್ಡನ್ ಮಸೀದಿಯ ನಿರ್ಣಾಮಕ್ಕೆ ಹೊರಟಿದ್ದಾರೆ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಭಟ್ಕಳದ ಗೋಲ್ಡನ್ ಮಸೀದಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಇಸ್ಲಾಮ್ ಭಯೋತ್ಪಾದಕ ಧರ್ಮ ಅದನ್ನು ಮೆಲೋತ್ಪಾಟನೆ ಮಾಡಬೇಕು, ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬುದಾಗಿ ಕೂಡಾ ವಿವಾದಿತ ಹೇಳಿಕೆ ನೀಡಿದ್ದರು. ಅನಾರೋಗ್ಯ ಕಾರಣಕ್ಕಾಗಿ ನೇಪತ್ಯಕ್ಕೆ ಸರಿದಿದ್ದ ಅನಂತ ಕುಮಾರ್ ಹೆಗ್ಡೆ, ಆರೋಗ್ಯದಲ್ಲಿ ಸ್ವಲ್ಪ ಸುಧಾರಿಸಿದಾಗ ಮತ್ತೆ ತನ್ನ ನಾಲಿಗೆಯನ್ನು ಕೋಮು ಪ್ರಚೋದನಕಾರಿ ಹೇಳಿಕೆಗೆ ಸೀಮಿತ ಗೊಳಿಸಿರುವುದು ಖೇದಕರ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರೂ ಆದ ಕೆ. ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಅನಂತ ಕುಮಾರ್ ಹೆಗ್ಡೆಯಂತಹ ಸಂಸದರಿಗೆ ಅದೆಷ್ಟೋ ಅಭಿವೃದ್ಧಿ ವಿಷಯಗಳಲ್ಲಿ ರಾಜಕೀಯ ಮೈಲುಗಲ್ಲು ಸಾಧಿಸಬಹುದಿತ್ತು. ಆದರೆ ಅವರು ಸಂಘರ್ಷ ರಾಜಕೀಯಕ್ಕಿಳಿಯುತ್ತಿದ್ದಾರೆ. ಕನಿಷ್ಠ ತನ್ನ ದೈಹಿಕ ಆರೋಗ್ಯದ ಸ್ವಾಸ್ತ್ಯದ ಅನುಪಾತದಲ್ಲಿಯಾದರೂ ಅವರು ತಮ್ಮ ಪ್ರಚೋದನಕಾರಿ ಹೇಳಿಕೆಯನ್ನು ಸೀಮಿತಗೊಳಿಸಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಅವರು ತನ್ನ ಆರೋಗ್ಯ ನಿರ್ನಾಮ ಗೊಳ್ಳದ ಹಾಗೆ ಕಾಳಜಿ ವಹಿಸಲಿ. ಧಾರ್ಮಿಕ ಕೇಂದ್ರಗಳ ಬಗ್ಗೆ ವಿವಾದಿತ ಹೇಳಿಕೆ ನೀಡಲು ರಾಜ್ಯದಲ್ಲಿ ಅದೆಷ್ಟೋ ಆರೋಗ್ಯವಂತ ಹರಕು ಬಾಯಿ ಈಶ್ವರಪ್ಪಂದಿರು, ವೈದ್ಯ ವೃತ್ತಿ ಮರೆತು ಹೋದ ಡಾಕ್ಟರ್ ಕಲ್ಲಡ್ಕ ಭಟ್, ಹುಟ್ಟು ಅವಿವಾಹಿತ ಪ್ರಮೋದ್ ಮುತಾಲಿಕರೆಲ್ಲ ಅಸ್ತಿತ್ವದಲ್ಲಿರುವಾಗ ಹೆಗ್ಡೆಯವರು ತಮ್ಮ ಉಳಿದ ಆಯುಷ್ಯವನ್ನು ಸಂಸ್ಕಾರ ವೃದ್ಧಿಸುವುದಕ್ಕೆ ವ್ಯಯಿಸುವುದು ಸೂಕ್ತವೆಂದು ಅರಿಯುವುದು ಒಳಿತು ಎಂದು ಅಶ್ರಫ್ ಸಲಹೆ ನೀಡಿದ್ದಾರೆ.

Join Whatsapp
Exit mobile version