ಹೊಸಪೇಟೆ( ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಡಿ. ಪೋಲಪ್ಪ ಎಂಬುವರು ತನ್ನ ಕುಟುಂಬದ ಒಂಬತ್ತು ಜನ ಸದಸ್ಯರೊಂದಿಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಹಾಗೂ ಇತರೆ ಮೂವರ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.
‘ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ’ ಎಂದು ಸಚಿವ ಆನಂದ್ ಸಿಂಗ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೋಲಪ್ಪ ಅವರು ಅವರ ಕುಟುಂಬದ ಒಂಬತ್ತು ಜನ ಸದಸ್ಯರೊಂದಿಗೆ ಮಂಗಳವಾರ ಸಂಜೆ ನಗರದ ಎಸ್ಪಿ ಕಚೇರಿ ಎದುರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ತಡೆದು, ಆಸ್ಪತ್ರೆಗೆ ಕಳಿಸಿದ್ದರು.
ಈ ಸಂಬಂಧ ಡಿ. ಪೋಲಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಐ.ಪಿ.ಸಿ. ಸೆಕ್ಷೆನ್ 504, 506ರ ಅಡಿ ಎಸ್ಸಿ/ಎಸ್ಟಿ ಕಾಯ್ದೆ ಅಡಿಯಲ್ಲಿ ಆನಂದ್ ಸಿಂಗ್, ಮರಿಯಪ್ಪ, ಹನುಮಂತಪ್ಪ ಹಾಗೂ ಹುಲುಗಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಆನಂದ್ ಸಿಂಗ್ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಸಿದ್ದಾರೆ. ಅದನ್ನು ತೆರವುಗೊಳಿಸುವಂತೆ ವರ್ಷದ ಹಿಂದೆ ದಾಖಲೆಗಳ ಸಮೇತ ದೂರು ಕೊಟ್ಟಿದ್ದೆ. ಇತ್ತೀಚೆಗೆ ನಗರಸಭೆ ಪೌರಾಯುಕ್ತರ ಗಮನಕ್ಕೂ ತಂದಿದ್ದೆ. ಅದಕ್ಕಾಗಿ ನನಗೆ ಈ ಹಿಂದೆ ಜೀವ ಬೆದರಿಕೆ ಹಾಕಿದ್ದರು. ಮಂಗಳವಾರ ಮಧ್ಯಾಹ್ನ 35 ರಿಂದ 40 ಜನರೊಂದಿಗೆ ಏಕಾಏಕಿ ನನ್ನ ಮನೆಗೆ ಬಂದು, ‘ಪದೇ ಪದೇ ನನ್ನ ವಿರುದ್ಧ ದೂರು ಕೊಡುವುದು, ಮಾತನಾಡುತ್ತಿರುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದೀರಿ. ನೀನು ಬದುಕಿದ್ದರೆ ತಾನೇ ಇದೆಲ್ಲ. ನಿನ್ನ ಕುಟುಂಬದವರನ್ನು ಜೀವ ಸಮೇತ ಉಳಿಸಲ್ಲ’ ಎಂದು ಪ್ರಾಣ ಬೆದರಿಕೆ ಹಾಕಿದರು. ನಗರಸಭೆಯವರನ್ನು ಕರೆಸಿ, ಇವರ ಆಸ್ತಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆದೇಶಿಸಿದರು ಎಂದು ಪೋಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.