ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಹುಜನ ಚಳುವಳಿಯ ಹಿರಿಯ ಹೋರಾಟಗಾರರೂ, ಬರಹಗಾರರು, ಅಪ್ಪಟ ಅಂಬೇಡ್ಕರ್ ವಾದಿ ಪಿ. ಡೀಕಯ್ಯ ನಿಧನರಾಗಿದ್ದಾರೆ. ದಲಿತ ಹಾಗೂ ಹಿಂದುಲಿದ ವರ್ಗಗಳ ಪರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ನಾಯಕತ್ವ ನೀಡುತ್ತಿದ್ದ ಪಿ. ಡೀಕಯ್ಯನವರ ನಿಧನಕ್ಕೆ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಶೋಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೀಕಯ್ಯ ಮನುವಾದಿ ಆಧಾರಿತ ಕೋಮುವಾದದ ವಿರುದ್ಧದ ಪ್ರಬಲ ದ್ವನಿಯಾಗಿದ್ದರು. ಫ್ಯಾಶಿಸಂ ವಿರುದ್ಧ ರಾಜಿ ರಹಿತ ಹೋರಾಟ ನಡೆಸುತ್ತಿದ್ದ ಡೀಕಯ್ಯನವರು ಅಲ್ಪಸಂಖ್ಯಾತ, ಹಿಂದುಲಿದ ದಲಿತ ವರ್ಗಗಳ ರಾಜಕೀಯ ಶಕ್ತಿಯ ಅನಿವಾರ್ಯತೆಯ ಪ್ರತಿಪಾದಕರಾಗಿದ್ದರು. ಅಂತಹ ಧೀಮಂತ ವ್ಯಕ್ತಿತ್ವದ ಡೀಕಯ್ಯನವರ ಅಗಲಿಕೆಯು ಶೋಷಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್ ಡಿಪಿಐ ಪಕ್ಷದ ಹಿತೈಷಿ ಹಾಗೂ ಅಭಿಮಾನಿಯಾಗಿದ್ದ ಅವರ ಹೋರಾಟ ಚಳುವಳಿಯು ನವ ತಲೆಮಾರಿಗೆ ಮಾದರಿಯಾಗಿರಲಿ. ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಅಬೂಬಕ್ಕರ್ ಕುಳಾಯಿ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.