Home ಟಾಪ್ ಸುದ್ದಿಗಳು ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು: SDPI ಸ್ವಾಗತ

ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು: SDPI ಸ್ವಾಗತ

ಅನಿಯಂತ್ರಿತ ಕಾರ್ಯಾಚರಣೆಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಹೆಜ್ಜೆ

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯ ಬುಲ್ಡೋಜರ್ ಕಾರ್ಯಾಚರಣೆ ಕ್ರೌರ್ಯದ ವಿರುದ್ಧ ನೀಡಿದ ಐತಿಹಾಸಿಕ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಸ್ವಾಗತಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ತೀರ್ಪು “ಬುಲ್ಡೋಜರ್ ನ್ಯಾಯ” ಎಂದು ಕರೆಯಲ್ಪಡುವ ಅನಿಯಂತ್ರಿತ ಮತ್ತು ಅಸಂವಿಧಾನಿಕ ಕಾರ್ಯಾಚರಣೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ ಎಂದು ಹೇಳಿದ್ದಾರೆ.

ಕ್ರಿಮಿನಲ್ ಆರೋಪ ಅಥವಾ ಶಿಕ್ಷೆಯನ್ನು ವಿಧಿಸಿದ ಆಧಾರದ ಮೇಲೆ ಆಸ್ತಿಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಒತ್ತಿಹೇಳಿದೆ. ನ್ಯಾಯಾಲಯದ ಈ ತೀರ್ಪು ಕಾರ್ಯಾಂಗದ ಸರಿಯಾದ ಪ್ರಕ್ರಿಯೆಯನ್ನು ಮತ್ತು ಅಪರಾಧ ಅಥವಾ ನಿರಪರಾಧಿ ಎಂದು ಘೋಷಿಸುವಲ್ಲಿ ನ್ಯಾಯಾಂಗದ ಪಾತ್ರವನ್ನು ಬೈಪಾಸ್ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಬಲಪಡಿಸುತ್ತದೆ. ಆ ರೀತಿ ಮನೆ, ಕಟ್ಟಡ ಕೆಡವುವುದನ್ನು ಕಾನೂನುಬಾಹಿರ ಮತ್ತು ಕಾನೂನಿನ ಉಲ್ಲಂಘನೆ ಎಂದು ಘೋಷಿಸುವ ಮೂಲಕ, ನ್ಯಾಯಾಲಯ ದೇಶದ ಪ್ರಜೆಗಳ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸಿದಯಲ್ಲದೆ, ಎಲ್ಲಾ ನಾಗರಿಕರಿಗೆ ಅವರ ಸಾಮಾಜಿಕ ಅಥವಾ ರಾಜಕೀಯ ಸ್ಥಾನ ಏನೇ ಇದ್ದರೂ ಅವರ ಸಂವಿಧಾನ ಬದಗಿಸಿರುವ ಸಮಾನ ನ್ಯಾಯದ ಹಕ್ಕನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ಎಸ್ಡಿಪಿಐ ಪಕ್ಷ ಕಾರ್ಯಾಂಗದ ಅತಿಕ್ರಮಣ ಪ್ರವೃತ್ತಿಯ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಾ ಬಂದಿದೆ. ಅಲ್ಲಿ ಆರೋಪಿಗಳ ಆಸ್ತಿಗಳನ್ನು ಕಾನೂನು ಪ್ರಕ್ರಿಯೆ ಅಥವಾ ನ್ಯಾಯಾಂಗ ಪರಿಶೀಲನೆಯಿಲ್ಲದೆ ಕೆಡವಲಾಗುತ್ತಿತ್ತು. ಅಂತಹ ಕ್ರಿಯೆಗಳ ಅಪಾಯಗಳನ್ನು ನಮ್ಮ ಪಕ್ಷ ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದೆ. ಇದು ಸಾಮಾನ್ಯ ವರ್ಗದ ಕುಟುಂಬಗಳು ಮತ್ತು ಸಮುದಾಯಗಳಿಗೆ ಸಾಮೂಹಿಕ ಶಿಕ್ಷೆಗೆ ಕಾರಣವಾಗುತ್ತಿದ್ದು ಇದರಿಂದ ಬಾಧಿತರಿಗೆ ಯಾವುದೇ ಕಾನೂನು ಸಹಾಯ ಲಭ್ಯವಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶವು ಅಂತಹ ಮಿತಿಮೀರಿದ ಅನಿಯಂತ್ರಿತ ಕಾರ್ಯಾಚರಣೆಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಯಾವುದೇ ತೆರವು ಕಾರ್ಯಾಚರಣೆಗಳಿಗೆ ಮೊದಲೇ ಸೂಕ್ತ ನೋಟಿಸ್ ನೀಡಬೇಕು, ಪ್ರಕರಣದ ಬಗ್ಗೆ ಅಹವಾಲು ಆಲಿಸಬೇಕು ಮತ್ತು ವಿಚಾರಣೆ ಹಾಗೂ ಮತ್ತು ನ್ಯಾಯಾಂಗ ಪರಿಶೀಲನೆ ಸೇರಿದಂತೆ ಎಲ್ಲ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂಬ ನ್ಯಾಯಾಲಯದ ನಿರ್ದೇಶನವನ್ನು ನಾವು ಪೂರ್ಣ ಮನಃಪೂರ್ವಕವಾಗಿ ಬೆಂಬಲಿಸುತ್ತೇವೆ. ಈ ನಿರ್ದೇಶನ ಕಾನೂನುಬಾಹಿರವಾಗಿ ತೆರವು ಮತ್ತು ಕೆಡವವುವ ಕಾರ್ಯ ಮಾಡುವ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೊರಿಸುತ್ತದೆ ಮತ್ತು ಅಂತಹ ಕಾನೂನುಬಾಹಿರ ಕಾರ್ಯಚರಣೆಯಲ್ಲಿ ನಷ್ಟಕ್ಕೆ ಒಳಗಾದವರಿಗೆ ಅಧಿಕಾರಿಗಳು ತಮ್ಮ ವೇತನದಿಂದ ನಷ್ಟ ಭರಿಸಬೇಕು ಎಂದು ಸೂಚಿಸುವ ಮೂಲಕ ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ.

ಈ ತೀರ್ಪು ಆಡಳಿತ ಯಂತ್ರದಿಂದ ಅಧಿಕಾರ ದುರುಪಯೋಗದ ವಿರುದ್ಧ ಬಲವಾದ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ ನ್ಯಾಯ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ. ಈ ತೀರ್ಪು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ಮತ್ತು ವಿಚಾರಣೆಯಿಲ್ಲದೆ ಯಾರಿಗೂ ಶಿಕ್ಷೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದ್ದು ಇದನ್ನು ನಾವು ಸ್ವಾಗತಿಸುತ್ತೇವೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ತೀರ್ಪನ್ನು ತಕ್ಷಣ ಗಮನಿಸಬೇಕು ಮತ್ತು ಅಕ್ರಮ ನಿರ್ಮಾಣ ಅಥವಾ ಇತರ ಪ್ರಕರಣಗಳ ಸಂದರ್ಭದಲ್ಲಿ ತೆರವು ಕಾರ್ಯಾಚರಣೆಗಳನ್ನು ಕಾನೂನಿನ ಪ್ರಕಾರ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳು ಮತ್ತು ಘನತೆಯನ್ನು ಗೌರವಿಸುವ ರೀತಿಯಲ್ಲಿ ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ನೋಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.

Join Whatsapp
Exit mobile version