Home ಟಾಪ್ ಸುದ್ದಿಗಳು SSFನ ಸಿರಾಜ್ ಪತ್ರಿಕೆಯ ವರದಿಗಾರನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಈಗ ಆಲಪ್ಪುಝ ಜಿಲ್ಲಾಧಿಕಾರಿ

SSFನ ಸಿರಾಜ್ ಪತ್ರಿಕೆಯ ವರದಿಗಾರನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಈಗ ಆಲಪ್ಪುಝ ಜಿಲ್ಲಾಧಿಕಾರಿ

►ಕೇರಳ ಸರಕಾರದ ನಡೆಗೆ ವ್ಯಾಪಕ ಆಕ್ರೋಶ – ಇಂದು ಆಲಪ್ಪುಝದಲ್ಲಿ ಪ್ರತಿಭಟನೆ

ತಿರುವನಂತಪುರಂ: ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪತ್ರಕರ್ತನೋರ್ವನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ಅವರನ್ನು ಆಲಪ್ಪುಝ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಸಹಿತ ಹಲವರು ಸರಕಾರದ ಈ ನಡೆಯನ್ನು ವಿರೋಧಿಸಿದ್ದಾರೆ.

ಸರಕಾರದ ಈ ನಡೆಯನ್ನು ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ ವೇಣುಗೋಪಾಲ್ ಟೀಕಿಸಿದ್ದು, ಒಬ್ಬ ವ್ಯಕ್ತಿಯ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಜಿಲ್ಲೆಯ ಅತ್ಯುನ್ನತ ಹುದ್ದೆಗೆ ನಿಯೋಜಿಸಿರುವುದು ಖೇದಕರ ಎಂದು ಹೇಳಿದ್ದಾರೆ.

ಜನತೆಯ ಮುಂದೆ ಕೊಲೆ ಆರೋಪಿಯಂತಿರುವ ವ್ಯಕ್ತಿಗೆ ಜನರ ನೇರ ಸಂಪರ್ಕ ಇರುವ ಜಿಲ್ಲಾಧಿಕಾರಿ ಹುದ್ದೆ ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಪ್ರಶ್ನಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ಇಂದು ಆಲಪ್ಪುಝ ಜಿಲ್ಲಾಧಿಕಾರಿ ಕಚೇರಿ (ಕಲೆಕ್ಟರ್ ಆಫೀಸ್) ಬಳಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.

2019ರ ಆಗಸ್ಟ್‌ ಮೂರರಂದು ಮಧ್ಯರಾತ್ರಿ  1 ಗಂಟೆಯ ವೇಳೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಓಡಿಸುತ್ತಾ ಬಂದಿದ್ದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ಮ್ಯೂಸಿಯಂ ರಸ್ತೆಯಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಪತ್ರಕರ್ತ ಕೆ.ಎಂ ಬಶೀರ್ ಅವರಿಗೆ ಢಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಬಶೀರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಲ್ಲದೇ ಢಿಕ್ಕಿಯಾದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿತ್ತು.

35 ವರ್ಷದ ಬಶೀರ್ ಎಸ್ಸೆಸ್ಸೆಫ್ ಮುಖವಾಣಿ ಸಿರಾಜ್ ದಿನ ಪ್ರತಿಕೆಯ ತಿರುವನಂತಪುರಂ ಬ್ಯೂರೋ ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬಶೀರ್ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಪಾಲ್ಗೊಂಡಿದ್ದರು. ಅಲ್ಲದೇ ಈ ಪ್ರಕರಣದ ತನಿಖೆ ಹಾದಿತಪ್ಪದಂತೆ ನಡೆಯಲಿದ್ದು, ವೆಂಕಿಟರಾಮನ್‌ಗೆ ಐಎಎಸ್ ಅಧಿಕಾರಿ ಎಂಬ ಪ್ರಾತಿನಿಧ್ಯವಿಲ್ಲದೇ ತನಿಖೆ ಮುಂದುವರಿಯಲಿದೆ ಎಂದಿದ್ದರು.

ಘಟನೆಯ ಬಳಿಕ ಶ್ರೀರಾಂ ವೆಂಕಿಟರಾಮನ್‌ನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತು ಅವಧಿ ಮುಗಿದ ಬೆನ್ನಲ್ಲೇ ಜನರೊಂದಿಗೆ ನೇರ ಸಂಪರ್ಕ ಇಲ್ಲದ ಹುದ್ದೆಯನ್ನು ಆರೋಗ್ಯ ಇಲಾಖೆಯಲ್ಲಿ ನೀಡಲಾಗಿತ್ತು.

ಆದರೆ ಇದೀಗ ಆರೋಪಿತ ಅಧಿಕಾರಿಯನ್ನೇ ಆಲಪ್ಪುಝದ ಜಿಲ್ಲಾಧಿಕಾರಿಯಾಗಿ ಸರಕಾರ ನಿಯುಕ್ತಿಗೊಳಿಸಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

Join Whatsapp
Exit mobile version